ಬಿಸ್ಕಿಟ್ ಬಾಕ್ಸುಗಳಲ್ಲಿ ತುಂಬಿಸಿ ನವಜಾತ ಶಿಶುಗಳ ಸ್ಮಗ್ಲಿಂಗ್ ಮಾಡುತ್ತಿದ್ದ ಜಾಲದ 11 ಮಂದಿ ಸೆರೆ

ಕೋಲ್ಕತ್ತ : ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲು ದತ್ತು ಕೇಂದ್ರವೊಂದಕ್ಕೆ ಬಿಸ್ಕಿಟ್ ಕಂಟೇನರುಗಲ್ಲಿ ತುಂಬಿಸಿ ನವಜಾತ ಶಿಶುಗಳನ್ನು ಸಾಗಾಟ ಮಾಡುತ್ತಿದ್ದ ಜಾಲದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಇಲ್ಲಿನ ಖಾಸಗಿ ನರ್ಸಿಂಗ್ ಹೋಮೊಂದಕ್ಕೆ ದಾಳಿ ಮಾಡಿದ ಬಳಿಕ ಆರೋಪಿಗಳಲ್ಲಿ ಒಬ್ಬೊಬ್ಬರ ಬಂಧನ ಸಾಧ್ಯವಾಗಿದೆ. ದಾಳಿ ವೇಳೆ ನರ್ಸಿಂಗ್ ಹೋಮಿನ ಬೀಗ ಹಾಕಲಾಗಿದ್ದ ಮೆಡಿಕಲ್ ಉಗ್ರಾಣವೊಂದರಲ್ಲಿ ಕಾರ್ಡ್ ಬೋರ್ಡ್ ಬಾಕ್ಸುಗಳಲ್ಲಿ ಎರಡು ಮಗು ಪತ್ತೆಯಾಗಿತ್ತು.

ಬಂಧಿತರಲ್ಲಿ ನರ್ಸಿಂಗ್ ಹೋಮಿನ ಮಾಲಕ, ಮಿಡ್-ವೈಫುಗಳು ಮತ್ತು ಇತರ ಸಿಬ್ಬಂದಿ ಒಳಗೊಂಡಿದ್ದಾರೆ. ಈ ಘಟನೆ ಕೋಲ್ಕತ್ತದಿಂದ 80 ಕಿ ಮೀ ದೂರದ ಬದುರಿಯಾದಲ್ಲಿ ನಡೆದಿದೆ.

ಮಕ್ಕಳ ಮಾರಾಟಕ್ಕೆ ನಕಲಿ ದಾಖಲೆಪತ್ರ ತಯಾರಿಸುತ್ತಿದ್ದರೆನ್ನಲಾದ ಕೋರ್ಟ್ ಜವಾನರು ಹಾಗೂ ದತ್ತು ಕೇಂದ್ರ ಸಂಚಾಲನೆಯ ಚಾರಿಟಿಯೊಂದರ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ನರ್ಸಿಂಗ್ ಹೋಮಿಗೆ ಗರ್ಭಪಾತ ಮಾಡಿಸಿಕೊಳ್ಳಲು ಬರುತ್ತಿದ್ದ ಅವಿವಾಹಿತ ಗರ್ಭಿಣಿಯರು ಮತ್ತು ಇತರ ಗರ್ಭಿಣಿ ಮಹಿಳೆಯರನ್ನು ಮನವೊಲಿಸುತ್ತಿದ್ದ ಸಿಬ್ಬಂದಿಯು, ಆ ಮಹಿಳೆಯರು ಮಗುವಿಗೆ ಜನ್ಮ ನೀಡುವಂತೆ ಮಾಡಿ, ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದರು.

ಗಂಡು ಮಗು ಹೆತ್ತ ತಾಯಂದಿರಿಗೆ 300,00 ರೂ (4,380 ಡಾಲರ್) ಮತ್ತು ಹೆಣ್ಣು ಮಗುವಿಗೆ 1,00,000 ರೂ (1,460 ಡಾಲರ್) ನೀಡಲಾಗುತ್ತಿತ್ತು ಎಂದು ಸ್ಥಳೀಯ ಸುದ್ದಿ ಮೂಲಗಳು ವರದಿ ಮಾಡಿವೆ.

ನರ್ಸಿಂಗ್ ಹೋಮಿನಲ್ಲಿ ಹುಟ್ಟಿದ ಮಕ್ಕಳನ್ನೂ ಕಳವು ಮಾಡಲಾಗುತ್ತಿತ್ತು. ಆದರೆ ‘ನಿಮ್ಮ ಮಗು ಮೃತಪಟ್ಟಿದೆ’ ಎಂದು ಮಹಿಳೆಯರಿಗೆ ಸಿಬ್ಬಂದಿ ಹೇಳುತ್ತಿದ್ದರು ಮತ್ತು ಸತ್ತಿರುವ ಮಗುಗಳನ್ನು ತೋರಿಸಿ ಪಾಲಕರನ್ನು ಸಮಾಧಾನಪಡಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ನವಜಾತ ಶಿಶುಗಳನ್ನು ಬಿಸ್ಕಿಟ್ ತುಂಬಿಸುವ ಪೆಟ್ಟಿಗೆಗಳಲ್ಲಿ ತುಂಬಿಸಿ, ವಾಹನಗಳಲ್ಲಿ ರಸ್ತೆ ಮೂಲಕ ಮಚ್ಲಾಂದಪುರದಲ್ಲಿರುವ ದತ್ತು ಕೇಂದ್ರಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಈ ಮಗುಗಳನ್ನು ಮಾರಾಟ ಮಾಡಲಾಗುತ್ತಿತ್ತು.

‘ಇದೊಂದು ಸಂಘಟಿತ ಜಾಲವಾಗಿದೆ. ಈ ಸ್ಮಗ್ಲಿಂಗ್ ಜಾಲದಲ್ಲಿ ಎಲ್ಲ ಅಗತ್ಯವಿರುವ ಕೈಗಳು ಶಾಮೀಲಾಗಿವೆ” ಎಂದು ಮತ್ತೊಬ್ಬ ಸಿಐಡಿ ಅಧಿಕಾರಿ ತಿಳಿಸಿದರು.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2015ರಲ್ಲಿ ಭಾರತದಲ್ಲಿ ಮಕ್ಕಳ ಕಳ್ಳ ಸಾಗಾಟ ಶೇ 25ರಷ್ಟು ಏರಿಕೆಯಾಗಿದೆ. ಇದರಲ್ಲಿ ಶೇ 40ರಷ್ಟು ಮಕ್ಕಳನ್ನು ಖರೀದಿ, ಮಾರಾಟ ಮತ್ತು ಆಧುನಿಕ ದಿನದ ಗುಲಾಮರಂತೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ಸರ್ಕಾರಿ ಕ್ರೈಂ ಡಾಟಾ ಹೇಳುತ್ತದೆ.2014ರಲ್ಲಿ 5,66 ಮಾನವ ಕಳ್ಳ ಸಾಗಾಟ ಪ್ರಕರಣಗಳು ನಡೆದಿದ್ದರೆ, ಕಳೆದ ವರ್ಷ ಈ ಸಂಖ್ಯೆ 6,877 ಆಗಿತ್ತು ಎಂದು ರಾಷ್ಟ್ರೀಯ ಕ್ರೈಂ ದಾಖಲೆಗಳ ಬ್ಯೂರೋ (ಎನ್‍ಸಿಆರ್‍ಬಿ) ಹೇಳಿದೆ. ಇದರಲ್ಲಿ ಅತ್ಯಧಿಕ ಮಾನವ ಕಳ್ಳ ಸಾಗಾಟ ಕೇಸುಗಳು ಅಸ್ಸಾಂನಲ್ಲಿ ನಡೆದಿದ್ದರೆ, ಪಶ್ಚಿಮ ಬಂಗಾಲಕ್ಕೆ ಎರಡನೇ ಸ್ಥಾನ ಸಂದಿದೆ. ಭಾರತವನ್ನೊಳಗೊಂಡಿರುವ ದಕ್ಷಿಣ ಏಷ್ಯಾವು ಜಗತ್ತಿನಲ್ಲೇ ಮಾನವ ಕಳ್ಳ ಸಾಗಾಟ ಪ್ರಾಂತ್ಯವಾಗಿ ಅತಿ ವೇಗವಾಗಿ ಬೆಳೆಯುತ್ತಿದೆ.

ಗ್ಯಾಂಗುಗಳು ಸಾವಿರಾರು ಕಾರ್ಮಿಕರನ್ನು ಜೀತ ಪದ್ಧತಿಗೆ ಮಾರಾಟ ಮಾಡುತ್ತಿವೆ ಮತ್ತು ಅಂತಹವರು ಮನೆ ಯಜಮಾನರಿಂದ ನಿತ್ಯ ದೌರ್ಜನ್ಯಕ್ಕೊಳಗಾಗುವಂತಾಗಿದೆ. ಇದೇ ರೀತಿ ಹಲವಾರು ಮಹಿಳೆಯರು ಮತ್ತು ಬಾಲಕಿಯರನ್ನು ವೇಶ್ಯಾವಾಟಿಕೆ ಗೃಹಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಡಾಟಾ ಹೇಳುತ್ತದೆ.

ಜಗತ್ತಿನ ಅಂದಾಜು ಶೇ 4.5 ಕೋಟಿ ಜೀತದಾಳುಗಳಲ್ಲಿ ಭಾರತವೊಂದರಲ್ಲೇ ಈ ಪ್ರಮಾಣ ಶೇ 40ರಷ್ಟಿದೆ ಎಂದು ಆಸ್ಟ್ರೇಲಿಯಾ ಮೂಲದ ವಾಕ್ ಫ್ರೀ ಫೌಂಡೇಶನಿನ 2016ರ ಜಾಗತಿಕ ಗುಲಾಮಗಿರಿ ಅಂಕಿಅಂಶ ಹೇಳುತ್ತದೆ.