108 ಅಂಬುಲೆನ್ಸ್ ಸೇವೆಗೆ ಹೊಸ ಕಂಪನಿಗೆ ಇಲಾಖೆ ಟೆಂಡರ್ ಆಹ್ವಾನ

ಸಾಂದರ್ಭಿಕ ಚಿತ್ರ

108 ಆರೋಗ್ಯ ಕವಚ ಅಂಬುಲೆನ್ಸುಗಳನ್ನು ತುರ್ತು ವೈದ್ಯಕೀಯ ಸ್ಪಂದನೆಗಾಗಿ ಒದಗಿಸಲು ಜಿವಿಕೆ-ಎಮ್ರಿ ಕಂಪನಿ ಜೊತೆಗೆ ಮಾಡಿಕೊಂಡಿದ್ದ ಒಂಭತ್ತು ವರ್ಷಗಳ ಒಪ್ಪಂದವನ್ನು ರಾಜ್ಯ ಆರೋಗ್ಯ ಇಲಾಖೆ ಕಡಿದುಕೊಂಡಿದೆ. ಟೆಂಡರ್ ನಿಯಮಗಳನ್ನು ಉಲ್ಲಂಘಿಸುವ ಆರೋಪದ ಹಿನ್ನೆಲೆಯಲ್ಲಿ ಒಪ್ಪಂದವನ್ನು ಮುರಿಯಲಾಗಿದೆ.

ಇದೀಗ ಸೇವೆ ಒದಗಿಸುವ ಕಂಪನಿಗಾಗಿ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಅಲ್ಲಿಸಲು ಸೆಪ್ಟೆಂಬರ್ 9ರಂದು ಕೊನೆಯ ದಿನಾಂಕವಾಗಿದೆ. ಜುಲೈ 14ರ ದಿನಾಂಕವಿರುವ ಒಪ್ಪಂದ ಮುಕ್ತಾಯದ ಪ್ರಕಟಣೆಯಲ್ಲಿ ಆರೋಗ್ಯ ಆಯುಕ್ತ ಸುಬೋದ್ ಯಾದವ್ ಕಂಪನಿಯು ಸೇವೆಯಲ್ಲಿ ದುವ್ರ್ಯವಹಾರ ಮಾಡಿರುವುದಾಗಿ ಹೇಳಿದ್ದಾರೆ. ಜನರಿಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿ ವಿಳಂಬವಾಗುತ್ತಿದ್ದ ಉದಾಹರಣೆ ಯನ್ನೂ ನೀಡಲಾಗಿದೆ. ಇದು ಸಂಪೂರ್ಣ ಯೋಜನೆಯ ಉದ್ದೇಶವನ್ನೇ ವಿಫಲವಾಗಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆದರೆ ಅಕ್ಟೋಬರ್ 13ರವರೆಗೆ ಸಂಸ್ಥೆಯು ಸೇವೆ ಒದಗಿಸುವುದನ್ನು ಮುಂದುವರಿಸಲಿದೆ. ಅಲ್ಲಿಗೆ ಸಂಸ್ಥೆಯ ಮೂರು ತಿಂಗಳ ನೊಟೀಸ್ ಅವಧಿ ಮುಗಿಯುತ್ತದೆ. ಅಂಬುಲೆನ್ಸುಗಳನ್ನು ಕಳುಹಿಸದೆ ಇರುವುದು ಮತ್ತು ಜನರ ಕರೆಗಳನ್ನು ಅಲಕ್ಷಿಸಿರುವ ಹಲವು ದೂರುಗಳು ಸಂಸ್ಥೆಯ ಸೇವೆಯ ವಿರುದ್ಧ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

“ಸಂಸ್ಥೆಗೆ ಹಲವು ಸಲ ಎಚ್ಚರಿಕೆ ನೀಡಲಾಗಿದೆ. ಅಂಬುಲೆನ್ಸುಗಳನ್ನು ತ್ವರಿತವಾಗಿ ಲಭ್ಯವಾಗುವಂತೆ ನಿರ್ವಹಿಸುವಂತೆಯೂ ಹೇಳಲಾಗಿತ್ತು. ಸಂಸ್ಥೆಯ ಸಿಬ್ಬಂದಿ ಪ್ರತಿಭಟನೆ ನಡೆಸಿರುವುದು ಮತ್ತು ಇನ್ನೂ ಹಲವು ಬಿಕ್ಕಟ್ಟುಗಳ ಕಾರಣ ಅಂಬುಲೆನ್ಸ್ ಸೇವೆಗೆ ಸಮಸ್ಯೆಯಾಗಿತ್ತು. ಹಾಗೆಯೇ ಜಿಪಿಎಸ್ ಟ್ರಾಕಿಂಗ್, ಕೌಶಲ್ಯ ವೃದ್ಧಿ ಮೊದಲಾಗಿ ಹಲವು ಬೇಡಿಕೆಗಳು ಅವಧಿಗೆ ತಕ್ಕಂತೆ ಪೂರೈಸಲಾಗಿಲ್ಲ. ಸರ್ಕಾರಿ ಆಸ್ಪತ್ರೆಗಳು ಲಭ್ಯವಿದ್ದಾಗಲೂ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕೊಂಡೊಯ್ಯುವ ಅಕ್ರಮಗಳೂ ವರದಿಯಾಗಿದ್ದವು” ಎಂದೂ ಶಾಲಿನಿ ಹೇಳಿದ್ದಾರೆ.