ದೇವದಾಸಿ ಪದ್ಧತಿಗೆ ತಳ್ಳುತ್ತಿದ್ದ 10 ವರ್ಷದ ಬಾಲಕಿಯ ರಕ್ಷಣೆ

ಸಾಂದರ್ಭಿಕ ಚಿತ್ರ

ಕಲ್ಬುರ್ಗಿ : ಜಿಲ್ಲೆಯ ಚಿತ್ತಾಪುರ ತಾಲೂಕಿನ ಹತ್ತು ವರ್ಷದ ಬಾಲಕಿಯನ್ನು ದೇವದಾಸಿ ಪದ್ಧತಿಗೆ ಬಲವಂತದಿಂದ ತಳ್ಳುತ್ತಿದ್ದ ವೇಳೆ ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಕ್ಕಳ ಸಹಾಯವಾಣಿ ಘಟಕ ಮತ್ತು ಅಧಿಕಾರಿಗಳು ಆಕೆಯನ್ನು ಕಾಪಾಡಿದ್ದಾರೆ. ಸಾಮಾಜದ ದುಷ್ಟ ಆಚರಣೆಯಾದ ದೇವದಾಸಿ ಪದ್ಧತಿಯನ್ನು ಐದು ವರ್ಷಗಳ ಹಿಂದೆಯೇ ನಿಷೇಧಿಸಲ್ಪಟ್ಟಿದ್ದರೂ ಈ  ಆಚರಣೆ ಇನ್ನೂ ನಡೆಯುತ್ತಿದೆ. ಗುರುವಾರ ಸಂಜೆ ಬಾಲಕಿಯ ಹೆತ್ತವರು ಮತ್ತು ದೇವಸ್ಥಾನದ ಅರ್ಚಕ ಸೇರಿ ಬಾಲಕಿಯನ್ನು ದೇವದಾಸಿ ವಿಧಿವಿಧಾನಗಳಿಗೆ ಒಳಪಡಿಸುತ್ತಿದ್ದ ವೇಳೆ ಸಂರಕ್ಷಿಸಲಾಗಿದ್ದು, ಬಾಲಕಿಯ ಹೆತ್ತವರು ಮತ್ತು ಸಮ್ಮವ ದೇವಸ್ಥಾನದ ಅರ್ಚಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

“ದಲಿತ ಬಾಲಕಿಯನ್ನು ದೇವದಾಸಿ ಪದ್ಧತಿಗೆ ತಳ್ಳುತ್ತಿದ್ದ ವಿಚಾರ ಮಕ್ಕಳ ಸಹಾಯವಾಣಿಯ ಮುಖಾಂತರ ಮಧ್ಯಾಹ್ನ 2 ಗಂಟೆಗೆ ನಮ್ಮ ಗಮನಕ್ಕೆ ಬಂದಿತ್ತು. ಎರಡು ಗಂಟೆಗಳಲ್ಲಿ ನಾವು ಬಾಲಕಿಯನ್ನು ರಕ್ಷಿಸಿದ್ದೇವೆ” ಎಂದು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ವಿಟ್ಟಲ್ ಚಿಕಣಿ ಹೇಳಿದ್ದಾರೆ.

“ಬಾಲಕಿ ಧೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿದ್ದಳು. ದೇವಸ್ಥಾನದ ಅರ್ಚಕ ನೀಡಿದ ಸಲಹೆಯಂತೆ ವಿಧಿವಿಧಾನ ನೆರವೇರಿಸಲು ನಿರ್ಧರಿಸಿದೆವು” ಎಂದು ಬಾಲಕಿಯ ಹೆತ್ತವರು ಹೇಳಿದ್ದಾರೆ. ಈ ವಿಚಾರ ಇಬ್ಬರು ಶಿಕ್ಷಕಿಯರಿಗೆ ತಿಳಿದಿದ್ದರೂ ಅವರು ಮೌನ ವಹಿಸಿದ್ದರು. ದೇವಸ್ಥಾನದ ಅರ್ಚಕ ಕಳೆದ ಹತ್ತು ವರ್ಷಗಳಿಂದ ಸುಮಾರು 1,000ಕ್ಕೂ ಅಧಿಕ ಹೆಣ್ಮಕ್ಕಳಿಗೆ ದೇವದಾಸಿ ವಿಧಿವಿಧಾನ ನೆರವೇರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದು ಗಂಭೀರವಾದ ಪ್ರಕರಣವಾಗಿದ್ದು, ಈ ಬಗ್ಗೆ ಮೌನ ವಹಿಸಿದ್ದ ಶಿಕ್ಷಕಿಯರ ವಿರದ್ದ ಎಫ್ ಐ ಆರ್ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡೆಪ್ಯುಟಿ ಕಮಿಷನರ್ ಉಜ್ವಲಕುಮಾರ್ ಘೋಷ್ ಸೂಚಿಸಿದ್ದಾರೆ. ಬಾಲಕಿಯನ್ನು ಸರ್ಕಾರಿ ಬಾಲಕಿಯರ ನಿವಾಸಕ್ಕೆ ಸೇರಿಸಲಾಗುವುದು, ಸರ್ಕಾರಿ ವಸತಿ ಶಾಲೆಗೆ ಸೇರ್ಪಡೆಗೊಳಿಸಿ ಶಿಕ್ಷಣ ನೀಡಲಾಗುವುದು ಎಂದು ಘೋಷ್ ಹೇಳಿದ್ದಾರೆ.