10ರ ಬಾಲಕ 75 ಪದಕಗಳ ಸರದಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : 10 ವರ್ಷದ ಬಾಲಕ ಮುಹಮ್ಮದ್ ಶಮಿಲ್ ಅರ್ಷಾದ್ ರೋಲರ್ ಸ್ಕೇಟಿಂಗಿನಲ್ಲಿ ಇದುವರೆಗೆ ಬರೋಬ್ಬರಿ 75 ಪದಕಗಳನ್ನು ಗಳಿಸಿಕೊಂಡಿದ್ದಾನೆ. ಇವುಗಳಲ್ಲಿ 10 ಪದಕಗಳು ವಿವಿಧ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ಪಿನಲ್ಲಿ ಗಳಿಸಿದ್ದಾಗಿದೆ.

ನಗರದ ಜೆಪ್ಪಿನಮೊಗರು ಯೆನೆಪೋಯ ಶಾಲೆಯ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಶಮಿಲ್ ಇತ್ತೀಚೆಗೆ ಪುದುಚೇರಿಯಲ್ಲಿ ನಡೆದ ಆಲ್ ಇಂಡಿಯಾ ಓಪನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ 4 ಚಿನ್ನ ಮತ್ತು ವ್ಯಯುಕ್ತಿಕ ಚಾಂಪಿಯನ್ ಶಿಪ್ಪನ್ನು ತನ್ನದಾಗಿಸಿಕೊಂಡಿದ್ದಾನೆ.

ಇದೇ ಸ್ಪರ್ಧೆಯಲ್ಲಿ ಇನ್ನೊಬ್ಬ ಬಾಲಕ ಮಂಗಳೂರಿನ ಕೇಂಬ್ರಿಡ್ಜ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ದಶೇಲ್ ಅಮೆಂಡಾ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ವೈಯಕ್ತಿಕ ಚಾಂಪಿಯನ್ ಶಿಪ್ಪನ್ನು ತನ್ನದಾಗಿಸಿಕೊಂಡಿದ್ದಾನೆ. ಕೆನರಾ ಸಿ ಬಿ ಎಸ್ ಇ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ತನ್ಮಯ್ ಕೊಟ್ಟಾರಿ ಮೂರು ಚಿನ್ನ ಮತ್ತು ವೈಯಕ್ತಿಕ ಚಾಂಪಿಯನ್ ಶಿಪ್ಪನ್ನು ಗಳಿಸಿದ್ದಾನೆ.

ಹೈ ಫ್ಲಯರ್ಸ್ ಸ್ಕೇಟಿಂಗ್ ಕ್ಲಬ್ಬಿನಲ್ಲಿ ತರಬೇತಿ ಪಡೆಯುತ್ತಿರುವ ಶಾಮಿಲ್ ದಶೇಲ್ ಮತ್ತು ತನ್ಮಯ್ ಕೆ ಮೋಹನದಾಸ್ ಮತ್ತು ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಜನವರಿ 18ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆದ 54ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಶಮಿಲ್ ಮೂರು ಚಿನ್ನದ ಪದಕಗಳನ್ನು ಮತ್ತು ವೈಯಕ್ತಿಕ ಚಾಂಪಿಯನ್ ಶಿಪ್ಪನ್ನು ಗಳಿಸಿದ್ದಾನೆ. ಈ ಸ್ಪರ್ಧೆಯಲ್ಲಿ 26 ರಾಜ್ಯಗಳಿಂದ 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರ್ಷಾದ್ ಹಸೈನ್ ಎಂ ಎಸ್ ಮತ್ತು ರಮ್ಲತ್ ಅರ್ಷಾದ್ ದಂಪತಿಯ ಪುತ್ರನಾದ ಶಮಿಲ್ ತನ್ನ ಮೊದಲ ಚಿನ್ನದ ಪದಕವನ್ನು 2012ರ ನವೆಂಬರಿನಲ್ಲಿ  ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಪಡೆದುಕೊಂಡಿದ್ದಾನೆ. ಸುಮಾರು 53 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ 2013 ನವೆಂಬರಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಮತ್ತು ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದ್ದಾನೆ.