ಕಮ್ಮನಹಳ್ಳಿ ಲೈಂಗಿಕ ಕಿರುಕುಳ ಪ್ರಕರಣ : 10 ಮಂದಿ ಬಂಧನ

ಬೆಂಗಳೂರು :  ನಗರದ ಕಮ್ಮನಹಳ್ಳಿ ಪ್ರದೇಶದಲ್ಲಿ  ಜನವರಿ 1ರ ಬೆಳಗ್ಗಿನ ಜಾವ ಮಹಿಳೆಯೊಬ್ಬಳ ಮೇಲೆ ಇಬ್ಬರು ದ್ವಿಚಕ್ರ ವಾಹನಿಗರು ನಡೆಸಿದ ಲೈಂಗಿಕ ಹಲ್ಲೆ ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು ಇಲ್ಲಿಯ ತನಕ ಅದೇ ಪ್ರದೇಶದ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ.

“ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಇಬ್ಬರು ನಡೆಸಿದ್ದರೆ, ಅಲ್ಲಿ ಇತರರೂ ಇದ್ದರು.  ಇಡೀ ಘಟನೆಯನ್ನು ಗಮನಿಸುತ್ತಿದ್ದ ಇತರ ಇಬ್ಬರು ಬೈಕುಧಾರಿಗಳೂ ಅಲ್ಲಿದ್ದರು, ಅವರೆಲ್ಲರೂ ಪರಿಚಿತರೆಂದು ನಮಗನಿಸುತ್ತದೆ” ಎಂದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ ನಂತರ ಒಟ್ಟು 12 ಮಂದಿಯನ್ನು ಬುಧವಾರ ಕಸ್ಟಡಿಗೆ ತೆಗದುಕೊಂಡಿದ್ದರೂ ಅವರಲ್ಲಿ ಇಬ್ಬರನ್ನು ವಿಚಾರಣೆ ನಂತರ ಬಿಡುಗಡೆಗೊಳಿಸಲಾಯಿತೆಂದು ತಿಳಿದುಬಂದಿದೆ.

ತರುವಾಯ ಬಂಧಿತರ ಕುಟುಂಬ ಸದಸ್ಯರು ಬಾಣಸವಾಡಿ ಪೊಲೀಸ್ ಠಾಣೆಯೆದುರು ಜಮಾಯಿಸಿ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದ್ದಾರೆ. ಆದರೆ ತಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದ ಮರುದಿನ ಸಂತ್ರಸ್ತೆ ಮತ್ತಾಕೆಯೊಂದಿಗೆ ಪಿಜಿಯಲ್ಲಿ ವಾಸಿಸುತ್ತಿದ್ದ ಆಕೆಯ ಸ್ನೇಹಿತೆ ನೆರೆಮನೆಯವರು  ಒಂದು ವಾರದ ಹಿಂದೆಯಷ್ಟೇ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಗಳನ್ನು ತೋರಿಸುವಂತೆ ಕೋರಿದ್ದರು. ಅದನ್ನು  ನೋಡಿದ ಮನೆಯೊಡೆಯ ಫ್ರಾನ್ಸಿಸ್ ಯುವತಿಯರಿಗೆ ಪೊಲೀಸ್ ದೂರು ದಾಖಲಿಸಲು ಸಲಹೆ ನೀಡಿದ್ದರೂ ಅವರು ನಿರಾಕರಿಸಿದ್ದೇ ಅಲ್ಲದೆ  ತಮ್ಮ ಪಿಜಿ ಸ್ಥಳವನ್ನೂ ತೊರೆದಿದ್ದರು. ಫ್ರಾನ್ಸಿಸ್ ಅವರು ಈ ವೀಡಿಯೊವನ್ನು ಬಹಿರಂಗಗೊಳಿಸಿದ ನಂತರವೇ ಪ್ರಕರಣ ಹೊರಜಗತ್ತಿಗೆ ತಿಳಿದುಬಂದಿತ್ತು.