ಶಾರ್ಟ್ ಸಕ್ರ್ಯೂಟಿನಿಂದ 10 ಎಕ್ರೆ ಪ್ರದೇಶದ ಮರಗಿಡಗಳು ಬೆಂಕಿಗಾಹುತಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ನಂದಿಕೂರಿನ ವಿದ್ಯುತ್ ಸಬ್ ಸ್ಟೇಷನ್ ಬಳಿಯ ಸುಮಾರು ಹತ್ತು ಎಕ್ರೆಗೂ ಅಧಿಕ ಪ್ರದೇಶದ ಕೃಷಿ ಭೂಮಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದಾಗಿ ಬೆಂಕಿ ಹತ್ತಿಕೊಂಡು ವಿವಿಧ ಬಗ್ಗೆ ಮರಗಳು ಬೆಂಕಿಗಾಹುತಿಯಾಗಿದ್ದಲ್ಲದೆ ಬಾರೀ ಆತಂಕ ಸೃಷ್ಟಿಸಿದೆ.

ನಂದಿಕೂರಿನ ಮುದರಂಗಡಿಗೆ ಹೋಗುವ ತಿರುವು ಬಳಿಯಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ಬೆಂಕಿ ಗಾಳಿಯ ರಭಸಕ್ಕೆ ಎಲ್ಲೆಡೆ ಆವರಿಸಿಕೊಂಡಿದೆ. ತಕ್ಷಣ ಸ್ಥಳೀಯ ಯುಪಿಸಿಎಲ್ ಹಾಗೂ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಸಾರ್ವಜನಿಕರು ಬಹಳಷ್ಟು ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಇದೇ ಪ್ರದೇಶದಲ್ಲಿ ಹತ್ತಾರು ವಾಸದ ಮನೆ, ವಿದ್ಯುತ್ ಸಬ್ ಸ್ಟೇಷನ್ ಇದ್ದು ಅದಕ್ಕೂ ಅಪಾಯ ಸಂಭವಿಸುವ ಸಾಧ್ಯತೆ ಇದ್ದ ಕಾರಣ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು.

ಯುಪಿಸಿಎಲ್ ಕಾರಣ

ಈ ಬಗ್ಗೆ ಮಾತನಾಡಿದ ಮಾಜಿ ತಾ ಪಂ ಸದಸ್ಯ ಲಕ್ಷ್ಮಣ್ ಶೆಟ್ಟಿ, “ಈ ಭಾಗದಲ್ಲಿ ಕಾರ್ಯಚರಿಸುತ್ತಿರುವ ಯುಪಿಸಿಎಲ್ ಕಂಪನಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣವಾಗಿದೆ. ಕಂಪನಿಯಿಂದ ಹಾರುವ ಉಪ್ಪಿನಾಂಶದಿಂದಾಗಿ ಕಂಪನಿಯಿಂದ ಸರಬರಾಜು ಆಗುತ್ತಿರುವ ಬೃಹತ್ ವಿದ್ಯುತ್ ತಂತಿಗಳು ತುಕ್ಕು ಹಿಡಿದು ಅದರಿಂದ ಉಂಟಾದ ಘರ್ಷನೆಯಿಂದ ಹಾರಿದ ಕಿಡಿಯಿಂದಾಗಿ ಈ ಬೆಂಕಿ ದುರಂತವಾಗಿದೆ. ಈ ಬಗ್ಗೆ ಬಹಳಷ್ಟು ಬಾರಿ ಯುಪಿಸಿಎಲ್ ಸಹಿತ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಾದರೂ ಈ ಬಗ್ಗೆ ಅವರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅದೇಷ್ಟೋ ತೆಂಗು, ಕಂಗು, ಮಾವು, ಹಲಸು ಮುಂತಾದ ಉತ್ತಮ ಮರಗಳು ಬೆಂಕಿಗೆ ಆಹುತಿಯಾಗುವಂತಾಗಿದೆ, ಮುಂದಿನ ದಿನದಲ್ಲಾದರೂ ಈ ಭಾಗದ ಆಯುಷ್ಯ ಕಳೆದುಕೊಂಡಿರುವ ತಂತಿಗಳನ್ನು ಬದಲಿಸುವ ಮೂಲಕ ಮತ್ತಷ್ಟು ಸಂಭವಿಸ ಬಹುದಾದ ಅನಾಹುತಗಳನ್ನು ತಪ್ಪಿಸಬೇಕಾಗಿದೆ” ಎಂದರು.