ಒಬ್ಬ ಸ್ಟಾಟ್ ಡೆತ್, ಮೂವರು ಗಂಭೀರ

ಕೇರಳ ಕಾರಿಗೆ ಲಾರಿ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಮುರ್ಡೇಶ್ವರ ಬಸ್ತಿ ಹೆದ್ದಾರಿಯಲ್ಲಿ ರವಿವಾರ ಮಧ್ಯಾಹ್ನ ಮೀನು ಲಾರಿ ಮತ್ತು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಮೂರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ಕಣ್ಣೂರಿನ ಕೆರಂಗಾಡಿ ನಿವಾಸಿ ಭಾಸ್ಕರನ್ ಕೃಷ್ಣನ್ (70) ಎನ್ನುವವರೇ ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಕೇರಳದ ರೇಜು ಮುಕುಂದನ್ (42), ರವೀಂದ್ರನ್ ಕೃಷ್ಣನ್ (65), ಚಾಲಕ ಶರೀಶ್ ಕೆ ಎನ್ ಕುಮಾರನ್ ಗಂಭೀರ ಗಾಯಗೊಂಡವರಾಗಿದ್ದಾರೆ. ಇವರು ಎರಡು ತಂಡವಾಗಿ ಕೇರಳದಿಂದ ಎರಡು ಕಾರುಗಳಲ್ಲಿ ದೇವಸ್ಥಾನಗಳಿಗೆ ಬಂದಿದ್ದು, ಕೊಲ್ಲೂರು ಮೂಕಾಂಬಿಕೆಯ ದರುಶನ ಪಡೆದು ಅಲ್ಲಿಂದ ಮುರ್ಡೇಶ್ವರಕ್ಕೆ ಬಂದಿದ್ದರು.

ರವಿವಾರ ಮಧ್ಯಾಹ್ನ ಮುರ್ಡೇಶ್ವರದಲ್ಲಿ ದೇವರ ದರುಶನ ಪಡೆದು ವಾಪಾಸು ಕೇರಳಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಬಸ್ತಿಯಲ್ಲಿ ಕಾರು ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಗೆ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಭಾಸ್ಕರನ್ ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಮೂರು ಜನರನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಪ್ರವಾಸಿಗರ ಜೊತೆಗೆ ಬಂದಿದ್ದ ಇನ್ನೊಂದು ತಂಡದ ಕಾರು ಹಿಂದೆಯೇ ಬರುತ್ತಿದ್ದು, ಡಿಕ್ಕಿಯಾಗಿದ್ದನ್ನು ಇವರೆಲ್ಲರೂ ಕಣ್ಣಾರೆ ಕಂಡಿದ್ದಾರೆ. ಇವರೆಲ್ಲರೂ ಪರಸ್ಪರ ಸಂಬಂಧಿಕರಾಗಿದ್ದಾರೆ. ಮೃತದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.