ಲಾರಿ-ಬಸ್ ಡಿಕ್ಕಿ : ಒಬ್ಬ ಸ್ಪಾಟ್ ಡೆತ್

13ಕ್ಕೂ ಹೆಚ್ಚು ಜನ ಗಂಭೀರ

ಭಟ್ಕಳ : ತಾಲೂಕಿನ ಬೆಳಕೆ ಸಮೀಪದ ಸೋಡಿಗದ್ದೆ ಕ್ರಾಸಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ಮೀನು ಲಾರಿ ಹಾಗೂ ಎರಡು ಖಾಸಗಿ ಬಸ್ಸುಗಳ ಮಧ್ಯೆ ನಡೆದ ಡಿಕ್ಕಿಯಲ್ಲಿ ಮೀನು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬಸ್ಸಿನಲ್ಲಿದ್ದ 13ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರದ ಬೋಳಕಟ್ಟೆ ನಿವಾಸಿ ಮೀನು ಲಾರಿ ಚಾಲಕ ಮೊಹ್ದೀನ್ ಅಬ್ದುಲ್ ಎಂಬಾತ ಮೃತಪಟ್ಟಿದ್ದಾನೆ. ಬಸ್ಸುಗಳಲ್ಲಿದ್ದ ಮೋಹನದಾಸ ರಘುಪತಿ ಹೆಗಡೆ ಮಂಗಳೂರು, ಸಂದೀಪ ಶೆಟ್ಟಿ ಮಲ್ಪೆ, ವಸಂತ ನಾರಾಯಣ ಶೆಟ್ಟಿ ಉಡುಪಿ, ವಿಜಯಲಕ್ಷ್ಮೀ ಸುಂದರ ಶೆಟ್ಟಿ ಮಲ್ಪೆ, ಸುಭಾಶ್ಚಂದ್ರ ಬಸಪ್ಪ ಕಮ್ಮಾರ ರೋಣ, ವಿದ್ಯಾ ನಾರಾಯಣ ಶೇಟ್ ಬಾಗಲಕೋಟೆ, ಸವಿತ ಶಂಕರ ಶೆಟ್ಟಿ ಹೆರಿಯಡ್ಕ, ಗಣೇಶ ವೆಂಕಟೇಶ ಹೆಬ್ಬಾರ ಮಂಗಳೂರು, ದಾವುಲ್ ಸಾಬ್ ಗದಗ ಹುಬಳ್ಳಿ, ಲೋಕೇಶ ಭೀಮಪ್ಪ ಬೆಳಗಾಂವ, ರುದ್ರಗೌಡ ಪಾಟೀಲ್ ಧಾರವಾಡ, ಅಯ್ಯೂಬ್ ಬೆಳಗಾಂವ್ ಗಂಭೀರ ಗಾಯಗೊಂಡಿದ್ದಾರೆ. ಡಿಕ್ಕಿಯಲ್ಲಿ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಹೇಳಲಾಗಿದೆ.

ಗೋವಾದಿಂದ ಮಂಗಳೂರಿಗೆ ಹೋಗುತ್ತಿದ್ದ ಮೀನು ಲಾರಿ ಹಾಗೂ ಮಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಸುಗಮಾ ಟ್ರಾವೆಲ್ಸ್ ಬಸ್ ಗಣೇಶ ಟ್ರಾವೆಲ್ಸ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಸ್ಟೇರಿಂಗಿನಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದ ಮೀನು ಲಾರಿ ಚಾಲಕನನ್ನು ಸಾರ್ವಜನಿಕರು ಹೊರತೆಗೆಯಲು ಪ್ರಯಾಸ ಪಡಬೇಕಾಯಿತು. ಗಂಭೀರ ಗಾಯಗೊಂಡವರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಮೀನು ಲಾರಿ ಮುಂಬದಿ ಭಾಗ ಸಂಪೂರ್ಣ ಜಖಂಗೊಂಡಿದ್ದರೆ, ಗಣೇಶ ಟ್ರಾವೆಲ್ಸ್ ಬಸ್ಸಿನ ಮುಂಬದಿ ಭಾಗ ಹಾಗೂ ಹಿಂಬದಿ ಭಾಗ ಜಖಂಗೊಂಡಿದೆ. ಗಣೇಶ್ ಟ್ರಾವೆಲ್ಸಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸುಗಮ ಟ್ರಾವೆಲ್ಸನ ಮುಂಬದಿ ಭಾಗಕ್ಕೂ ಹಾನಿಯಾಗಿದೆ. ತಡರಾತ್ರಿಯಾದರೂ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.