ಹೆಂಡತಿಯನ್ನು ಹೇಗೆ ಮರಳಿ ಪಡೆಯಲಿ?

ಹೆಂಡತಿ ಮಾಡುವ ಸಣ್ಣಪುಟ್ಟ ತಪ್ಪನ್ನೇ ದೊಡ್ಡದು ಮಾಡಿ ಕೂಗಾಡುವುದು ತಪ್ಪು ಅಂತ ಈಗಲಾದರೂ ಅರಿವಾಯಿತು ತಾನೇ? ಅವಳೂ ನಿಮ್ಮ ಹಾಗೇ ಮನುಷ್ಯಳು ಅನ್ನುವುದನ್ನು ಮರೆತುಬಿಟ್ಟಿರಾ?

ಪ್ರ : ನಮ್ಮ ಮದುವೆಯಾಗಿ ಒಂದೂವರೆ ವರ್ಷವಾಯಿತು. ಹೆಂಡತಿಯೂ ದುಡಿಯುತ್ತಾಳೆ. ನಮ್ಮಿಬ್ಬರ ಮಧ್ಯೆ ದಿನಾ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತಿತ್ತು. ಇಬ್ಬರಿಗೂ ಈಗೋ ಜಾಸ್ತಿ. ಅವಳೂ ಸೋಲುತ್ತಿರಲಿಲ್ಲ. ನನಗೆ ನನ್ನ ಮಾತೇ ನಡೆಯಬೇಕೆಂಬ ಹಠ. ಕೊನೆಗೂ ಒಂದು ದಿನ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಇನ್ನು ಜೊತೆಯಲ್ಲಿ ಬಾಳುವುದೇ ಕಷ್ಟ ಅಂತ ದೂರವಾಗಲು ನಿರ್ಧರಿಸಿದೆವು. ಡೈವೋರ್ಸಿಗೂ ಅರ್ಜಿ ಸಲ್ಲಿಸಿದ್ದೇವೆ. ಅವಳೀಗ ತನ್ನ ತವರು ಮನೆಯಲ್ಲಿದ್ದಾಳೆ. ಅವಳು ಮನೆಬಿಟ್ಟು ಹೋದ ಎರಡು ತಿಂಗಳಿಂದ ನನಗೆ ಜೀವನವೇ ಬೇಸರವಾಗಿ ಬಿಟ್ಟಿದೆ. ಅವಳನ್ನು ನೆನೆಸಿಕೊಳ್ಳದ ದಿನಗಳಿಲ್ಲ. ಅವಳನ್ನು ನಾನು ಪ್ರೀತಿಸುತ್ತಿದ್ದೆ ಅಂತ ಈಗ ಅನುಭವಕ್ಕೆ ಬರುತ್ತಿದೆ. ಅವಳು ನನಗೆ ಬೇಕು ಅನ್ನುವ ಹಂಬಲ ಅತಿಯಾಗುತ್ತಿದೆ. ಮದುವೆಯಾದ ಹೊಸದರಲ್ಲಿ ನಾವು ಕಳೆದ ಅನೇಕ ಸುಂದರ ದಿನಗಳು ಜ್ಞಾಪಕವಾಗುತ್ತಿದೆ. ನನ್ನ ಮುಂಗೋಪಕ್ಕೆ ಕಡಿವಾಣ ಹಾಕಿಕೊಂಡಿದ್ದರೆ ನಾನೀಗ ಒಂಟಿತನ ಅನುಭವಿಸಬೇಕಿರಲಿಲ್ಲ ಅಂತ ಪಶ್ಚಾತ್ತಾಪವಾಗುತ್ತಿದೆ. ಅವಳ ಚಿಕ್ಕಪುಟ್ಟ ತಪ್ಪಿಗೂ ನಾನು ಎಗರಾಡುತ್ತಿದ್ದೆ. ಆಗ ಅವಳೂ ಸಿಟ್ಟಾಗಿ ಕೂಗಾಡುತ್ತಿದ್ದಳು. ಈಗ ಬೇರೆ ಹುಡುಗಿಯನ್ನು ನನ್ನ ಸಂಗಾತಿಯಾಗಿ ಊಹಿಸಿಕೊಳ್ಳಲೂ ಕಷ್ಟವಾಗುತ್ತಿದೆ. ನಾನೀಗ ಹೇಗೆ ಅವಳನ್ನು ಪುನಃ ಪಡೆಯಲಿ?

: ಅವಸರದಲ್ಲಿ ತೀರ್ಮಾನ ತೆಗೆದುಕೊಂಡು ನಿಧಾನವಾಗಿ ಪಶ್ಚಾತ್ತಾಪ ಪಡುವುದಕ್ಕೆ ನಿಮ್ಮದು ಉತ್ತಮ ಉದಾಹರಣೆ. ವಿಳಂಬವಾಗಿಯಾದರೂ ನಿಮಗೆ ಜ್ಞಾನೋದಯವಾಯ್ತಲ್ಲ. ಹೆಂಡತಿ ಮಾಡುವ ಸಣ್ಣಪುಟ್ಟ ತಪ್ಪನ್ನೇ ದೊಡ್ಡದು ಮಾಡಿ ಕೂಗಾಡುವುದು ತಪ್ಪು ಅಂತ ಈಗಲಾದರೂ ಅರಿವಾಯಿತು ತಾನೇ. ಅವಳೂ ದುಡಿಯುವ ಮಹಿಳೆ. ಆಫೀಸು, ಮನೆ ಎಲ್ಲವನ್ನೂ ನಿಭಾಯಿಸುವ ಸಮಯದಲ್ಲಿ ಮಾನಸಿಕ ಒತ್ತಡದಿಂದಲೋ ಇಲ್ಲಾ ದೈಹಿಕ ಶ್ರಮದಿಂದಲೋ ಕೆಲವು ತಪ್ಪುಗಳಾಗುವುದು ಸಹಜ. ಅವಳೂ ನಿಮ್ಮ ಹಾಗೇ ಮನುಷ್ಯಳು ಅನ್ನುವುದನ್ನು ಮರೆತುಬಿಟ್ಟಿರಾ? ಈಗ ಒಂಟಿಯಾಗಿ ಜೀವನ ನಡೆಸುವಾಗ ನಿಮಗೆ ಅದರ ಬಿಸಿ ತಟ್ಟಿದೆ. ಆದರೂ ಈಗ ನೀವು ಕೂಲಾಗಿ ಆಲೋಚಿಸಿ. ಅವಳನ್ನು ಪುನಃ ನೀವು ಕರೆತಂದರೆ ಮತ್ತೆ ನಿಮ್ಮಿಬ್ಬರ ನಡುವೆ ವೈಮನಸ್ಸು ಉಂಟಾಗಲಿಕ್ಕಿಲ್ಲವೇ? ನೀವಿಬ್ಬರೂ ವಿರುದ್ಧ ದಿಕ್ಕಿನಲ್ಲಿ ನಡೆಯುವವರೇ ಆಗಿದ್ದರೆ ಜೀವನಪೂರ್ತಿ ಹೊಂದಾಣಿಕೆಯಿಲ್ಲದೇ ಬದುಕುವುದಕ್ಕಿಂತ ಈಗ ಸ್ವಲ್ಪ ಕಷ್ಟವೆನಿಸಿದರೂ ಕೊನೆಗೆ ಅವಳಿಲ್ಲದ ಜೀವನಕ್ಕೆ ಅಡ್ಜೆಸ್ಟ್ ಆಗಿಬಿಡುತ್ತೀರಿ. ಅದೂ ಅಲ್ಲದೇ ನೀವೇ ಈಗ ಅವಳನ್ನು ವಾಪಸು ಬಯಸುವುದರಿಂದ ಮುಂದೆ ಅವಳು ನಿಮ್ಮನ್ನು ಮಣಿಸಲು ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದು. ಇದನ್ನೆಲ್ಲ ಆಲೋಚಿಸಿದ ನಂತರವೂ ಅವಳನ್ನು ಪುನಃ ಬಯಸುವುದಾದರೆ ನಿಮಗಿಬ್ಬರಿಗೂ ಬೇಕಾದವರ ಮೂಲಕ ನಿಮ್ಮ ಇಚ್ಛೆಯನ್ನು ಅವಳಿಗೆ ತಿಳಿಸಬಹುದು. ಅವಳೂ ನಿಮ್ಮ ಹಾಗೇ ನಿಮ್ಮಿಂದ ದೂರವಾಗಿ ಪಶ್ಚಾತ್ತಾಪ ಪಡುತ್ತಿದ್ದರೆ ಕೂಡಲೇ ವಾಪಾಸು ಬಂದುಬಿಡಬಹುದು. ಗಂಡ, ಹೆಂಡತಿ ಒಂದಾಗುತ್ತೇವೆ ಅಂದರೆ ಯಾವ ನ್ಯಾಯಾಲಯವೂ ಬೇಡ ಅನ್ನುವುದಿಲ್ಲ. ಒಂದು ವೇಳೆ ಅವಳು ನಿಮ್ಮಿಂದ ವಿಚ್ಛೇದನವೇ ಬಯಸಿದ್ದರೆ ಅವಳನ್ನು ಪುನಃ ಒಲಿಸಿಕೊಳ್ಳುವುದು ಕಷ್ಟ.