ಹೆಂಡತಿಗೆ ಬಾಯ್‍ಪ್ರೆಂಡೂ ಇರಬಹುದೇ?

ಪ್ರ : ನನಗೆ ಮದುವೆಯಾಗಿ ಮೂರು ವರ್ಷಗಳಾದವು. ನಮ್ಮದು ಲವ್ ಮ್ಯಾರೇಜ್. ಅವಳು ನನ್ನ ಕಲೀಗ್ ಆಗಿದ್ದಳು. ಪಾಶ್ ಹುಡುಗಿ. ಚಟಪಟಾಂತ ಎಲ್ಲರ ಜೊತೆ ಮಾತಾಡುವವಳು. ಅನೇಕ ಹುಡುಗರು ಅವಳ ಹಿಂದೆ ಬಿದ್ದಿದ್ದರೂ ಅವಳು ನನ್ನನ್ನೇ ಬಯಸಿದಳು. ಆಕರ್ಷಕ ಹುಡುಗಿ ಅವಳಾಗಿಯೇ ಪ್ರಪೋಸ್ ಮಾಡಿದಾಗ ನನ್ನ ಇಗೋ ನಿಜಕ್ಕೂ ಬೂಸ್ಟ್ ಆಯಿತು. ಒಂದು ವರ್ಷದ ಡೇಟಿಂಗ್ ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾದೆವು. ಅದೇ ಸಮಯದಲ್ಲಿ ನನಗೆ ಬೇರೆ ಕಡೆ ವರ್ಗವಾದ್ದರಿಂದ ಅವಳು ಕೆಲಸ ಬಿಟ್ಟು ನನ್ನ ಜೊತೆ ಬಂದಳು. ಆದರೆ ಅವಳು ಕೆಲಸವಿಲ್ಲದೇ ತುಂಬಾ ಡಲ್ ಇರುತ್ತಿದ್ದಳು. ನಾನಿರುವ ಕಡೆ ಅವಳಿಗೆ ಸರಿಯಾದ ಕೆಲಸ ಸಿಗದ ಕಾರಣ ಅವಳನ್ನು ಪುನಃ ಮೊದಲಿದ್ದ ಊರಿಗೇ ಕಳಿಸಿದೆ. ಅಲ್ಲಿ ಅವಳು ಅಮ್ಮನ ಮನೆಯಲ್ಲಿದ್ದು ಕೆಲಸಕ್ಕೆ ಹೋಗುತ್ತಿದ್ದಳು. ಈಗ ನಾನೂ ಅವಳಿದ್ದ ಊರಿನಲ್ಲಿಯೇ ಕೆಲಸ ಹಿಡಿದು ಮನೆ ಮಾಡಿಕೊಂಡು ಇದ್ದೇವೆ. ಆದರೆ ನನ್ನ ಹೆಂಡತಿ ಮೊದಲಿನಂತೆ ನನ್ನನ್ನು ಪ್ರೀತಿಸುತ್ತಿಲ್ಲ ಅನ್ನುವ ಭಾವನೆ ಬರುತ್ತಿದೆ. ಮನೆಯಲ್ಲಿ ಇದ್ದಷ್ಟು ಹೊತ್ತೂ ಅವಳು ಒಂದೇ ಮೊಬೈಲಿನಲ್ಲಿ ಮಾತಾಡುತ್ತಿರುತ್ತಾಳೆ, ಇಲ್ಲವೇ ಕಂಪ್ಯೂಟರ್ ಮುಂದೆ ಕುಳಿತು ಫೇಸ್ ಬುಕ್ಕಿನಲ್ಲಿ ಮುಳುಗಿರುತ್ತಾಳೆ. ನನ್ನ ಬಗ್ಗೆ ಸ್ವಲ್ಪವೂ ಗಮನವಿಲ್ಲ. ಬರೀ ಹೊಟೇಲಿನ ತಿಂಡಿ, ಊಟವೇ ಗತಿ. ಅವಳು ಸಂತೋಷದಿಂದಿರುವುದೇ ನನಗೆ ಮುಖ್ಯವಾಗಿತ್ತಾದರೂ ಈ ರೀತಿಯ ಬೇಜವಾಬ್ದಾರಿಯನ್ನು ಸಹಿಸುವುದು ಕಷ್ಟವಾಗುತ್ತಿದೆ. ಎರಡು-ಮೂರು ಸಲ ಅವಳು ಆಫೀಸಿನ ಸಮಯದಲ್ಲಿ ಯಾವುದೋ ಹುಡುಗನ ಜೊತೆ ಮಾಲ್‍ನಲ್ಲಿ ಕಾಣಿಸಿಕೊಂಡಿದ್ದನ್ನು ಪರಿಚಯವಿರುವವರು ನನ್ನ ಗಮನಕ್ಕೆ ತಂದಿದ್ದರು. ಅವಳಿಗೆ ಗಮ್ಮತ್ತು ಮಾಡುವುದು ಇಷ್ಟವಾದರೂ ಇಂತಹ ಕೆಳಮಟ್ಟಕ್ಕೆ ಇಳಿಯಲಾರಳು ಅಂತ ನನ್ನ ಭಾವನೆ. ನನಗೀಗ ಮಗು ಮಾಡಿಕೊಳ್ಳುವ ಬಯಕೆ. ಅದಕ್ಕೆ ಅವಳು ಸಹಕರಿಸುತ್ತಿಲ್ಲ. ನನಗೂ ಅವಳ ಬಗ್ಗೆ ಬೇಸರ ಮೂಡಿ ಈಗೀಗ ನಾನೂ ಮಾತಾಡುವುದನ್ನು ಕಡಿಮೆ ಮಾಡಿದ್ದೇನೆ. ಅವಳಿಗೆ ಬೇರೆ ಬಾಯ್ ಫ್ರೆಂಡ್ ಇರುವುದರಿಂದಲೇ ಮಗು ಮಾಡಿಕೊಳ್ಳಲು ಅವಳು ತಯಾರಿಲ್ಲದೇ ಇರಬಹುದೇ?

ಉ : ಈಗಿನ ಮಾಡರ್ನ್ ಹುಡುಗಿಯರ ಮನಸ್ಸನ್ನು ಅರಿಯುವುದೇ ಕಷ್ಟ. ಎಲ್ಲದರಲ್ಲೂ ಸಮಾನತೆ ಬಯಸುವ ಹೆಸರಿನಲ್ಲಿ ಬಿಂದಾಸಾಗುವುದು ಕಳವಳದ ಸಂಗತಿ. ನಮ್ಮ ಸಮಾಜದಲ್ಲಿ ಮನೆ ನಡೆದುಕೊಂಡು ಹೋಗುವುದು ಹೆಚ್ಚಾಗಿ ಮಹಿಳೆಯರಿಂದಲೇ. ಅವರೇ ಕುಟುಂಬದ ಜೀವಾಳ. ಒಂದು ವಿಧದಲ್ಲಿ ಗಂಡಂದಿರನ್ನು ಹಿಡಿದಿಟ್ಟುಕೊಳ್ಳುವ ಜವಾಬ್ದಾರಿಯೂ ಅವರಲ್ಲಿದೆ. ಆದರೆ ನಿಮ್ಮ ಕೇಸಿನಲ್ಲಿ ಉಲ್ಟಾ ಆಗಿದೆ. ಹೆಂಡತಿಯನ್ನು ಹಿಡಿದಿಟ್ಟುಕೊಳ್ಳುವುದೇ ನಿಮಗೆ ಪ್ರಯಾಸವಾಗುತ್ತಿದೆ. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಬೇಕೆನ್ನುವುದು ನಿಜವಾದರೂ ಬೇಜವಾಬ್ದಾರಿ ಖಂಡಿತಾ ಸಲ್ಲ. ನೀವು ನಿಮ್ಮ ಹೆಂಡತಿಯ ಹತ್ತಿರ ಮುಕ್ತವಾಗಿ ಚರ್ಚಿಸಿ. ಅವಳ ಮನಸ್ಸಿನಲ್ಲೇನಿದೆ ಅಂತ ತಿಳಿಯಿರಿ. ಪ್ರತೀದಿನ ಹೊಟೇಲಿನ ಊಟಕ್ಕಿಂತ ಮನೆಯಲ್ಲಿಯೇ ತಯಾರಿಸಲು ನೀವೂ ಸಹಾಯ ಮಾಡುವುದಾಗಿ ತಿಳಿಸಿ. ಆಫೀಸಿನಲ್ಲಿ ದುಡಿದ ನಂತರ ಮನೆ ಕೆಲಸ ಕಷ್ಟವಾದರೂ ಇಬ್ಬರೂ ಕೆಲಸ ಹಂಚಿಕೊಂಡು ಮಾಡಿದರೆ ಕಷ್ಟವೇನಲ್ಲ. ಅವಳ ಮೇಲೆ ಗೂಢಚರ್ಯೆ ಮಾಡುವುದು ಸರಿಯಲ್ಲವಾದರೂ ಸಂಶಯಿಸುವುದಕ್ಕಿಂತ ಅವಳ ಚಲನವಲನದ ಬಗ್ಗೆ ಗಮನ ಇಟ್ಟು ಸತ್ಯ ಅರಿಯುವುದೇ ಒಳ್ಳೆಯದು. ಅವಳು ಬೇರೆ ಹುಡುಗನ ಜೊತೆ ಓಡಾಡುತ್ತಿರುವುದು ನಿಜವೇ ಆಗಿದ್ದರೆ ನೀವು ಅಂತದ್ದನ್ನೆಲ್ಲ ಸಹಿಸುವುದಿಲ್ಲ ಅಂತ ಖಡಕ್ಕಾಗಿ ಮೊದಲು ವಾರ್ನ್ ಮಾಡಿ. ಅವಳು ನಿಮ್ಮಿಂದ ವಿಮುಖಳಾಗುತ್ತಿರುವುದಕ್ಕೆ ನಿಮ್ಮಲ್ಲಿ ಏನಾದರೂ ದೋಷಗಳಿದ್ದರೆ ನೀವೂ ಸರಿಪಡಿಸಿಕೊಳ್ಳಿ. ಸಮಸ್ಯೆ ಏನೇ ಇದ್ದರೂ ಅದನ್ನು ತಾಳ್ಮೆಯಿಂದ ಕುಳಿತು ಮಾತಾಡಿ ಬಗೆಹರಿಸಿಕೊಳ್ಳಬೇಕೇ ವಿನಃ ಈ ರೀತಿ ಇಬ್ಬರ ಮುಖವೂ ವಿರುದ್ಧದಿಕ್ಕಿನಲ್ಲಿ ಇದ್ದರೆ ದಾಂಪತ್ಯದಲ್ಲಿ ಸಾಮರಸ್ಯ ಉಳಿಯುವುದಾದರೂ ಹೇಗೆ?