ಹಿಹಿರಿಯಡ್ಕ ಜೈಲಿನಲ್ಲಿ ಬಜರಂಗ ದಳದವರಿಂದ ಕೈದಿಗಳಿಬ್ಬರ ಮೇಲೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಆರೋಪಿಗಳಿಗೆ ಬಜರಂಗದಳದ ಕಾರ್ಯಕರ್ತರು ಹಿರಿಯಡ್ಕ ಜೈಲಿನೊಳಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಇರ್ಶಾದ್ ಮೊಯ್ದೀನ್ ಮತ್ತು ಕಾರ್ಕಳ ಬಂಗ್ಲೆ ಗುಡ್ಡೆಯ ರಫೀಕ್ ಹಲ್ಲೆಗೊಳಗಾದವರು. ಇವರ ಮೇಲೆ ಸುದೀಪ್ ಶೆಟ್ಟಿ, ಅಖಿಲೇಶ್ ಶೆಟ್ಟಿ, ಸುಕುಮಾರ್, ಮಂಜೇಶ್, ಪ್ರತೀಕ್ ಮತ್ತು ಪ್ರಶಾಂತ್ ಮೊಗವೀರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಹಿರಿಯಂಗಡಿ ಸಮೀಪ ನ 26ರಂದು ಸ್ವಿಫ್ಟ್ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟದ ವೇಳೆ ಪೊಲೀಸ್ ಮತ್ತು ಹೋಮ್‍ಗಾರ್ಡುಗಳಿಗೆ ಹಲ್ಲೆ ನಡೆಸಿ ಕಾರು ಬಿಟ್ಟು ಪರಾರಿಯಾಗಿದ್ದ ಇಬ್ಬರು ಆರೋಪಿಗಳಾದ ಇರ್ಶಾದ್ ಮತ್ತು ರಫೀಕ್ ಎಂಬವರನ್ನು ಬಳಿಕ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯದ ಆದೇಶದಂತೆ ಅವರಿಬ್ಬರನ್ನೂ ಹಿರಿಯಡ್ಕ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳನ್ನಾಗಿ ಇರಿಸಲಾಗಿತ್ತು. ಇರ್ಶಾದ್, ರಫೀಕ್ ಭಾನುವಾರದಂದು ಊಟ ಮಾಡುತ್ತಿದ್ದಾಗ ಅವರ ಬಳಿಗೆ ಆಗಮಿಸಿದ ಐದು ಮಂದಿ ಬಜರಂಗದಳದ ಕಾರ್ಯಕರ್ತರು ವಿನಾಕಾರಣ ಜಗಳ ನಡೆಸಿ ಹಲ್ಲೆಗೈದಿದ್ದಾರೆನ್ನಲಾಗಿದೆ. ಕೈಗಳಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆಂದು ತಿಳಿದು ಬಂದಿದೆ.