ಹಳೆಯಂಗಡಿ ಹೆದ್ದಾರಿ ಬದಿ ತ್ಯಾಜ್ಯ ತೆರವು

ಸಾಂದರ್ಭಿಕ ಚಿತ್ರ

ಮುಲ್ಕಿ : ಕಳೆದ ಕೆಲ ತಿಂಗಳಿನಿಂದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕೆಲ ಅಜ್ಞಾನಿಗಳು ಬಿಸಾಡಿ ತುಂಬಿ ತುಳುಕುತ್ತಿದ್ದ ತ್ಯಾಜ್ಯವನ್ನು ಹಳೆಯಂಗಡಿ ಪಂಚಾಯತ್ ಮುಖಾಂತರ ತೆರವುಗೊಳಿಸಲಾಗಿದೆ. ಸೋಮವಾರ ಹಳೆಯಂಗಡಿ ಪಂಚಾಯತಿ ತುರ್ತು ಕಾರ್ಯಾಚರಣೆ ನಡೆಸಿ ಹಳೆಯಂಗಡಿಯಿಂದ ಮಂಗಳೂರು ಹಾಗೂ ಹಳೆಯಂಗಡಿ ದಾಬಾ ಬಳಿಯಿಂದಲೂ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಹಳೆಯಂಗಡಿ ಪಂಚಾಯತಿ ಪಿಡಿಓ ಅಬೂಬಕ್ಕರ್ ಪತ್ರಿಕೆಯೊಂದಿಗೆ ಮಾತನಾಡಿ, “ಮುಂದಿನ ಎರಡು ದಿನಗಳಲ್ಲಿ ಎರಡೂ ಸ್ಥಳಗಳಲ್ಲಿ ಸೀಸಿ ಕ್ಯಾಮರಾಗಳನ್ನು ಅಳವಡಿಸಿ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಲಾಗುವುದು” ಎಂದು ತಿಳಿಸಿದ್ದಾರೆ.
ಪಂಚಾಯತ್ ಸದಸ್ಯ ವಸಂತ್ ಬೆರ್ನಾಡ್ ಮಾತನಾಡಿ, “ಹಳೆಯಂಗಡಿ ಪರಿಸರದ ಗ್ರಾಮಸ್ಥರು ಸ್ವಚ್ಛತೆಗೆ ಒತ್ತು ಕೊಟ್ಟು ಹಳೆಯಂಗಡಿಯನ್ನು ಮಾದರಿ ಗ್ರಾಮವನ್ನಾಗಿಸಲು ಪಣತೊಟ್ಟು ತ್ಯಾಜ್ಯ ಹಾಕುವ ದುಷ್ಕರ್ಮಿಗಳ ಪತ್ತೆಗೆ ಸಹಕಾರ ನೀಡಬೇಕು” ಎಂದು ತಿಳಿಸಿದ್ದಾರೆ.