ಸಿಂಪಲ್ ಆಂಡ್ ಬ್ಯೂಟಿಫುಲ್ `ಬ್ಯೂಟಿಫುಲ್ ಮನಸ್ಸುಗಳು’

 

ಸಿನಿಮಾ ಒಂದು ಮನಮುಟ್ಟಲು ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿ ಅದ್ದೂರಿ ಲೊಕೇಶನ್, ಮೈಮುರಿಯುವ ಫೈಟಿಂಗ್, ಅರೆಬರೆ ಬಟ್ಟೆ ಧರಿಸಿದ ಲಲನೆಯ ಐಟೆಂ, ಪಂಚಿಂಗ್ ಡಯಲಾಗ್ ಇವೆಲ್ಲ ಇರಲೇ ಬೇಕೆಂದೇನೂ ಇಲ್ಲವೆನ್ನುವುದನ್ನು `ಬ್ಯೂಟಿಫುಲ್ ಮನಸ್ಸುಗಳು’ ಸಿನಿಮಾ ಸಾಬೀತು ಮಾಡಿ ತೋರಿಸಿದೆ.
ಈ ಚಿತ್ರದಲ್ಲಿ `ಲೂಸಿಯಾ’ ಸಿನಿಮಾ ಖ್ಯಾತಿಯ ಸತೀಶ್ ನೀನಾಸಂ ಹಾಗೂ ಶ್ರುತಿಹರಿಹರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಇನ್ನೊಮ್ಮೆ ಈ ಜೋಡಿ ಸದಭಿರುಚಿಯ ಸಿನಿಮಾದ ಸಕ್ಸಸ್ಸಿಗೆ ಕಾರಣರಾಗಲಿದ್ದಾರೆ ಎಂದೇ ಹೇಳಬಹುದು.
ಬಾರ್ ಓನರ್ ಮಗ ಪ್ರಶಾಂತ(ಸತೀಶ್ ನಿನಾಸಂ)ಗೆ ಬ್ಯೂಟಿ ಪಾರ್ಲರಿನಲ್ಲಿ ಕೆಲಸ ಮಾಡುವ ನಂದಿನಿ(ಶೃತಿ ಹರಿಹರನ್) ಮೇಲೆ ಪ್ರೀತಿ ಹುಟ್ಟುತ್ತದೆ. ವಾಸ್ತವಿಕತೆಯ ಅರಿವಿರುವ ನಂದಿನಿ ತನ್ನ ಪರಿಸ್ಥಿತಿಯನ್ನು ಬೆನ್ನುಬಿದ್ದ ಹುಡುಗನಿಗೆ `ನೋಡಪ್ಪಾ ನಾನು ಹೀಗೆ, ನನ್ನ ಹಿನ್ನೆಲೆ ಹೀಗೆ. ನನಗೆ ಬೇಕಿರುವುದು ಗಂಡು ಮಾತ್ರ ಅಲ್ಲ, ದುಡಿದು ಸಾಕುವ ಮನಸ್ಥಿತಿ ಇದ್ದು, ಬದುಕಿ ಬಾಳಿಸುವ ಗಂಡಸು’ ಅಂತಾ ನೇರವಾಗಿಯೇ ಹೇಳುತ್ತಾಳೆ. ಹುಡುಗನೂ ಹುಡುಗಿ ಇಚ್ಚೆಗೆ ಸ್ಪಂದಿಸಿ ಇಬ್ಬರೂ ಪ್ರೇಮಲೋಕದಲ್ಲಿ ವಿಹರಿಸುತ್ತಿರುವಾಗಲೇ ಪೆÇಲೀಸ್ ಅಧಿಕಾರಿ ರಾಜಶೇಖರ್(ಅಚ್ಯುತ್ ಕುಮಾರ್) ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಬ್ಯೂಟಿ ಪಾರ್ಲರ್ ಮೇಲೆ ರೈಡ್ ಮಾಡಿ ನಂದಿನಿ ಸೇರಿದಂತೆ ಓನರ್ ಸಹಿತ ಎಲ್ಲರನ್ನೂ ಬಂಧಿಸುತ್ತಾನೆ. ಇದು ಮಾಧ್ಯಮಗಳಲ್ಲಿ ಎಕ್ಸ್ ಕ್ಲೂಸಿವ್ ಸುದ್ದಿ ಸಹ ಆಗಿಬಿಡುತ್ತದೆ. ಲಂಚಕ್ಕಾಗಿ ಅಧಿಕಾರಿಗಳು ಮಾಡುವ ತಪ್ಪುಗಳಿಂದ ಸಾಮಾನ್ಯರ ಬಾಳಿನಲ್ಲಿ ಉಂಟಾಗುವ ಬಿರುಗಾಳಿ, ಮಾಧ್ಯಮಗಳಲ್ಲಿ ಅಪರಾಧ ಸುದ್ದಿಗಳ ವೈಭವೀಕರಣದಿಂದ ಆಗಬಹುದಾದ ಅನಾಹುತಗಳು, ಪ್ರೀತಿಯಲ್ಲಿ ಬಿದ್ದ `ಬ್ಯೂಟಿಫುಲ್ ಮನಸ್ಸುಗಳು’ ಹೇಗೆಲ್ಲಾ ಒಡೆದು ಹೋಗುತ್ತವೆ ಎಂಬ ಎಲ್ಲಾ ಅಂಶಗಳು ಚಿತ್ರದಲ್ಲಿವೆ.
ನಿನಾಸಂ ಸತೀಶ್ ತನ್ನ ನೈಜ ನಟನೆಯಿಂದ ಪ್ರೇಕ್ಷಕರ ಮನಸೆಳೆದರೆ, ಕುಟುಂಬದ ಜವಾಬ್ದಾರಿ ಹೊತ್ತ ಮಧ್ಯಮ ವರ್ಗದ ಹೆಣ್ಣುಮಗಳಾಗಿ ಶೃತಿ ಹರಿಹರನ್ ತನ್ನ ಇನೋಸೆಂಟ್ ಲುಕ್ಕಿನಲ್ಲಿ ನೆರೆಮನೆ ಹುಡುಗಿ ತರಹ ಕಾಣಿಸಿಕೊಂಡಿದ್ದಾಳೆ. ಚಿತ್ರಕಥೆಗೆ ತಕ್ಕಂತೆ ಬೆಂಗಳೂರಿನಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆದಿದ್ದು ಕ್ಯಾಮೆರಾ ಕೈಚಳಕಕ್ಕೆ ಇನ್ನೂ ಹೆಚ್ಚು ಗಮನವಿದ್ದರೆ ಚೆನ್ನಾಗಿತ್ತು. ಬೇಕಾಬಿಟ್ಟಿ ಕಮರ್ಷಿಯಲ್ ಸಿನಿಮಾಗಳ ನಡುವೆ, ಇಂಥದ್ದೊಂದು ಬ್ಯೂಟಿಫುಲ್ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ಜಯತೀರ್ಥ ಎಂತಲೇ ಹೇಳಬಹುದು. ಇದೊಂದು ಕ್ಲಾಸ್ ಮತ್ತು ಮಾಸ್ ಚಿತ್ರವಾಗಿದ್ದು, ಕುಟುಂಬ ಸಮೇತ ಕೂತು ನೋಡಬಹುದಾದ ಸಿನಿಮಾ ಎಂದೇ ಹೇಳಬಹುದು.