`ವ್ಯಕ್ತಿ ಹಾಗೂ ವ್ಯವಸ್ಥೆಯ ನಡುವಣ ಸಂಬಂಧಗಳು ನನ್ನ ಸಿನೆಮಾಗಳಲ್ಲಿ ಪ್ರತಿಫಲಿಸುತ್ತವೆ’

ಸಂದರ್ಶನ

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಚಿತ್ರ ನಿರ್ದೇಶಕರಲ್ಲಿ ಗಿರೀಶ್ ಕಾಸರವಳ್ಳಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳ ಕಲಾತ್ಮಕತೆ, ವಿಭಿನ್ನ ಸ್ವರೂಪ ಹಾಗೂ ದೃಷ್ಟಿಕೋನ, ಸಮಾಜಕ್ಕೆ ನೀಡುವ ಸಂದೇಶಗಳು ಅನನ್ಯ. ಅವರೊಂದಿಗೆ ಮಾತನಾಡಿದಾಗ :
* ನಿಮ್ಮ ಚಿತ್ರಗಳೆಲ್ಲವೂ ಪ್ರಕಟಿತ ಕೃತಿಗಳ ಆಧರಿತವಾಗಿವೆ. ನೀವು ಹೇಗೆ ಆಯ್ಕೆ ಮಾಡುತ್ತೀರಿ ?
ನನ್ನ ಚಿತ್ರಗಳು ಪ್ರಕಟಿತ ಕೃತಿಗಳ ಆಧರಿತವಾಗಿದ್ದರೂ ಅವುಗಳಲ್ಲಿ ಹಲವಾರು ಬದಲಾವಣೆಗಳನ್ನು ನಾನು ಮಾಡುತ್ತೇನೆ. ನಾನು ಒಂದೊಮ್ಮೆ ಓದಿದ ಕಥೆ ನನಗೆ ಆ ಸಮಯದಲ್ಲಿ ಹಿಡಿಸದೇ ಇದ್ದರೂ ಮುಂದೊಂದು ದಿನ ಆ ಕಥೆ ನನ್ನ ಮನದಲ್ಲಿಯೇ ಉಳಿದು ಆ ಕಥೆ ಈಗಿನ ಸನ್ನಿವೇಶಕ್ಕೆ ಹೊಂದುತ್ತದೆ ಎಂದು ನನಗನಿಸಿದರೆ ನಾನು ಮತ್ತೊಮ್ಮೆ ಆ ಕಥೆಯತ್ತ ಗಮನ ಹರಿಸುತ್ತೇನೆ. ಹೆಚ್ಚಿನ ಸಂದರ್ಭಗಳಲ್ಲಿ ನಾನು ಆರಿಸುವ ಕಥೆಗಳಿಗಿಂತ ವಿಭಿನ್ನ ದೃಷ್ಟಿಕೋನದಲ್ಲಿ ನಾನು ಚಿತ್ರ ನಿರ್ಮಿಸುತ್ತೇನೆ. ನನ್ನ `ಗುಲಾಬಿ ಟಾಕೀಸ್’ ಚಿತ್ರಕ್ಕೆ ವೈದೇಹಿ ಅವರ ಕೊಡುಗೆಯನ್ನು ನಾನು ಉಲ್ಲೇಖಿಸಿರುವ ಬಗ್ಗೆ ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ ನನಗೆ ಆ ಚಿತ್ರ ಅವರ ಕಥೆಗೆ ಒಂದು ಪ್ರತಿಕ್ರಿಯೆಯಾಗಿದೆ. `ತಾಯಿ ಸಾಹೇಬ’, `ದ್ವೀಪ’, `ಕ್ರೌರ್ಯ’ ಮತ್ತು `ಕೂರ್ಮಾವತಾರ’ದ ವಿಚಾರಗಳಲ್ಲಿಯೂ ಇದೇ ಮಾತು ಅನ್ವಯಿಸುತ್ತದೆ. ಕನ್ನಡ ಸಾಹಿತ್ಯ ಹಾಗೂ ಕನ್ನಡ ಲೇಖಕರ ವಿಚಾರ ಹೇಳುವಾಗ ನಾನು ಅವರ ಕಥೆಗಳಿಗಿಂತ ಭಿನ್ನ ಕೋನದಲ್ಲಿ ಚಿತ್ರ ನಿರ್ಮಿಸಿದರೂ ಯಾರೂ ತಕರಾರೆತ್ತಿಲ್ಲ. `ಘಟಶ್ರಾದ್ಧ’ ಹೊರತು ಪಡಿಸಿ ನನ್ನ ಬೇರ್ಯಾವ ಚಿತ್ರ ಕೂಡ ಮೂಲ ಕೃತಿಯನ್ನು ಹೋಲುತ್ತಿಲ್ಲ.
* ಹಾಗಾದರೆ ನೀವೇ ಚಿತ್ರ ಕಥೆ ಬರೆಯುತ್ತೀರಿ ಎಂದರ್ಥ …
ನಾನು ಒಂದು ಕೃತಿಗೆ ನನ್ನ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಬಹುದು. ಇದೊಂದು ಭಿನ್ನ ರೀತಿಯ ಚಿತ್ರ ನಿರ್ಮಾಣ ಇಲ್ಲಿ ನನ್ನ ಪ್ರೇಕ್ಷಕರು ನನ್ನ ಪ್ರತಿಕ್ರಿಯೆಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾರೆ.
* ನೀವು ಬದಲಾವಣೆ ತರಲು ಪ್ರೇರಣೆ ಯಾವುದು ? ಉದಾ : ಲಿಲ್ಲಿ ಭಾಯಿ, ಗುಲಾಬಿ ಏಕಾಗುತ್ತಾಳೆ ?
ಇದನ್ನು ಬೊಟ್ಟು ಮಾಡಿ ಹೇಳುವುದು ಕಷ್ಟ. ಒಂದು ಚಿತ್ರಕಥೆ ಬರೆಯಲು ಕುಳಿತರೆ ತಿಂಗಳುಗಳೇ ಬೇಕಾಗುತ್ತವೆ. ವಿವಿಧ ಹಂತಗಳಲ್ಲಿ ಅವುಗಳಿಗೆ ವಿಭಿನ್ನ ತಿರುವುಗಳನ್ನು ಸೇರಿಸಲಾಗುತ್ತದೆ ಅಥವಾ ಅವುಗಳನ್ನು ತೆಗೆದು ಹಾಕಲಾಗುತ್ತದೆ. ಗುಲಾಬಿ ಟಾಕೀಸ್ ಚಿತ್ರದಲ್ಲಿ ಲಿಲ್ಲಿ ಭಾಯಿ ಗುಲಾಬಿ ಅಥವಾ ರಂಗಭೂಮಿ ಟೆಲಿವಿಷನ್ ಏಕಾಯಿತೆಂದು ಹೇಳುವುದು ಕಷ್ಟ.
* ನಿಮ್ಮ ಚಿತ್ರಗಳಲ್ಲಿ, ಮುಖ್ಯವಾಗಿ ನೀವು ನಂತರದ ದಿನಗಳಲ್ಲಿ ನಿರ್ಮಿಸಿದ ಚಿತ್ರಗಳಲ್ಲಿ ಮಹಿಳಾ ಕೇಂದ್ರಿತ ಪಾತ್ರಗಳಿವೆ. ಈ ಪಾತ್ರಗಳು ಚರ್ಚೆಯ ವಿಷಯಗಳೂ ಆಗಿವೆ. ಇದೊಂದು ಉದ್ದೇಶಪೂರ್ವಕ ನಿರ್ಧಾರವೇ ?
ನನ್ನ ಚಿತ್ರಗಳು ಮಹಿಳಾ ಕೇಂದ್ರಿತ ಅಥವಾ ಮಹಿಳೆಯರ ವಿಚಾರಗಳಿಗೇ ಒತ್ತು ನೀಡುತ್ತವೆಯೆಂದು ನನಗನಿಸುತ್ತಿಲ್ಲ. ಕೆಲವೊಮ್ಮೆ ಚಿತ್ರದ ನಿರೂಪಣೆ ಮಹಿಳೆಯ ಸುತ್ತ ಕೇಂದ್ರೀಕೃತವಾಗಿರುತ್ತದೆಯೆಂಬುದು ಕೇವಲ ಕಾಕತಾಳೀಯ. ನಾನು `ನಾಯಿ ನೆರಳು’ ಆಯ್ಕೆ ಮಾಡಿದಾಗ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಹಾಗೂ ಅಂಧಶ್ರದ್ಧೆಗಳನ್ನು ಸಮಾಜದ ಕೆಳಸ್ತರದ ಜನರು ಯಾವ ದೃಷ್ಟಿಕೋನದಿಂದ ನೋಡುತ್ತಾರೆಂದು ತಿಳಿಯುವ ಪ್ರಯತ್ನ ಮಾಡಿದೆ. ಒಂದು ಧಾರ್ಮಿಕ ವಿಧಿಗೆ ಒಂದು ಸಮುದಾಯ ಯಾ ವ್ಯಕ್ತಿ ಪ್ರತಿಕ್ರಿಯಿಸುವ ರೀತಿಯೇ ಒಂದು ವಿಧದ ಪ್ರತಿಭಟನೆಯಾಗಿದೆ. ಚಿತ್ರದಲ್ಲಿ ವೆಂಕಟಲಕ್ಷ್ಮಿ ಮಾಡುವುದು ಅದನ್ನೇ.
* ಬಂಡಾಯ ನಿಮ್ಮ ಚಿತ್ರಗಳಲ್ಲಿ ಹಲವು ವಿಧಗಳಲ್ಲಿ ಮೂಡಿ ಬಂದಿದೆಯಲ್ಲ ?
`ಘಟಶ್ರಾದ್ಧ’ ಹೊರತು ಪಡಿಸಿ ನನ್ನ ಚಿತ್ರಗಳ ಮಹಿಳಾ ಪಾತ್ರಧಾರಿಗಳಲ್ಲಿ ಚಿತ್ರದ ಕೊನೆಗೆ ಬದಲಾವಣೆಗಳಾಗುತ್ತವೆ. ಇದು ನಿಧಾನಗತಿಯ ಬೆಳವಣಿಗೆಯಾಗಿದೆ.
* ಅಡೂರು ಅವರ ಚಿತ್ರಗಳತ್ತ ನೀವು ಹೇಗೆ ಆಕರ್ಷಿತರಾದಿರಿ ? ಅವರ ಜೀವನಾಧರಿತ ಚಿತ್ರವನ್ನು ನೀವೇ ಮಾಡಬೇಕೆಂದು ಅವರು ನಿರ್ಧರಿಸಿದ್ದರಲ್ಲವೇ ?
ಅವರ ಚಿತ್ರಗಳೆಂದರೆ ನನಗೆ ಬಹಳ ಇಷ್ಟವೆಂಬುದು ಅಡೂರು ಅವರಿಗೆ ಗೊತ್ತಿತ್ತು. ಅವರ ಜೀವನ ಕಥೆ ಆಧರಿತ ಚಿತ್ರವನ್ನು ನಾನು ಮಾಡಬೇಕೆಂದು ಅವರು ಹೇಳಿದಾಗ ನನಗೆ ಅದೊಂದು ಉತ್ತಮ ಅವಕಾಶ ಎಂದು ನಾನಂದುಕೊಂಡೆ. ಅವರ ವೃತ್ತಿ ಹಾಗೂ ಖಾಸಗಿ ಬದುಕಿನ ಬಗ್ಗೆ ನನಗೆ ಹೆಚ್ಚು ಆಸಕ್ತಿಯಿರಲಿಲ್ಲ. ಆದರೆ ಅವರ ಚಿತ್ರ ನಿರ್ದೇಶನ ಶೈಲಿ ನನಗೆ ಬಹಳ ಇಷ್ಟದ ವಿಷಯವಾಗಿತ್ತು.
* ನಿಮ್ಮ ಚಿತ್ರರಂಗ ಜೀವನವನ್ನು ಹಿಂದಿರುಗಿ ನೋಡಿದಾಗ ಏನನ್ನಿಸುತ್ತದೆ ?
ಚಿತ್ರ ನಿರೂಪಣೆಯಲ್ಲಿ ನಾನು ಹಲವಾರು ಪ್ರಯೋಗಗಳನ್ನು ಮಾಡಿದ್ದೇನೆಂದು ನನಗನಿಸುತ್ತದೆ. ನನ್ನಲ್ಲಿನ ಬದ್ಥತೆ ಈಗಲೂ ಹಾಗೆಯೇ ಇದ್ದು ನನ್ನ ಅಭಿವ್ಯಕ್ತಿ ವಿಧಾನ ಮಾತ್ರ ಬದಲಾಗಿದೆ. ವ್ಯಕ್ತಿ ಮತ್ತು ವ್ಯವಸ್ಥೆಯ ಸಂಬಂಧಗಳತ್ತ ನಾನು ಯಾವತ್ತೂ ನನ್ನ ಗಮನ ಹರಿಸಿದ್ದೇನೆ.