ವಿಶ್ವದ ಅತ್ಯಂತ `ಡೈನಮಿಕ್ ನಗರ’ ಬೆಂಗಳೂರು ಅತ್ಯುತ್ತಮ ನಗರ ಅಲ್ಲ

  • ಅನಿಲ್ ನಾಯರ್

ನಮ್ಮ ಬೆಂಗಳೂರು ನಗರ ಜಾಗತಿಕ ಶ್ರೇಷ್ಠ ನಗರಗಳ ಶ್ರೇಣಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ನಗರ ಸೂಚ್ಯಂಕದ ಅನ್ವಯ ಬೆಂಗಳೂರು ವಿಶ್ವದ ಅತ್ಯಂತ ಚಲನಶೀಲ, ಕ್ರಿಯಾಶಕ್ತ ನಗರವಾಗಿದೆ. ಸಿಲಿಕಾನ್ ಕಣಿವೆ ಮತ್ತು ಶಾಂಘೈ ನಗರವನ್ನೂ ಮೀರಿಸಿದೆ. ಹೈದರಾಬಾದ್ ಸಹ ಮೊದಲ ಹತ್ತು ನಗರಗಳಲ್ಲಿ ಒಂದಾಗಿದ್ದು ಐದನೆಯ ಸ್ಥಾನ ಪಡೆದಿದೆ. ಇ ವಾಣಿಜ್ಯ ಉದ್ಯಮಿಗಳ ಅಭಿಪ್ರಾಯಕ್ಕೆ ಪೂರಕವಾಗಿ ಈ ಶ್ರೇಣಿಯ ಪಟ್ಟಿಯನ್ನು ಪ್ರಕಟಿಸಲಾಗಿದೆ.  ಹೊಸ ಪೀಳಿಗೆಯ ಉದ್ಯಮಗಳಿಗೆ ಬೆಂಗಳೂರು ಒಂದು ಪ್ರಶಸ್ತ ನಗರ ಎಂದು ಇ ವಾಣಿಜ್ಯ ಉದ್ಯಮಿಗಳು ಪ್ರತಿಪಾದಿಸುತ್ತಾರೆ.

ಆದರೆ ಈ ಸಾಧನೆಗೆ ಹಲವಾರು ಕಾರಣಗಳಿದ್ದು ಮೂಲತಃ ಉತ್ತಮ ವಾತಾವರಣ, ಕೌಶಲ್ಯಯುತ ಕಾರ್ಮಿಕರ ಲಭ್ಯತೆ ಇದಕ್ಕೆ ಕಾರಣ ಎನ್ನಲಾಗುತ್ತದೆ. ಬೆಂಗಳೂರು ನಗರ ಬಲವರ್ಧಕ ಔಷಧಿಯಿಂದ ಬೆಳೆದ ನಗರದಂತೆ ಬೆಳೆಯುತ್ತಿದ್ದು ಈ ಪ್ರಗತಿಯ ಪಥವನ್ನು ಸುಸ್ಥಿರತೆಯಿಂದ ಉಳಿಸಿಕೊಳ್ಳಲು ಸಾಧ್ಯವಾಗದು ಎಂಬ ಭೀತಿಯೂ ಆವರಿಸಿದೆ.

ಸ್ಪಷ್ಟ ಯೋಜನೆ ಇಲ್ಲದ ಬೆಳವಣಿಗೆಯಿಂದ ನಾಗರಿಕರು ಹಲವಾರು ಸಂಕಷ್ಟಗಳಿಗೆ ಗುರಿಯಾಗಿದ್ದಾರೆ.  ಟ್ರಾಫಿಕ್ ಜಾಮ್, ವಾಯು ಮಾಲಿನ್ಯ, ಹಸಿರು ಸಂಪತ್ತಿನ ನಾಶ, ಮುಕ್ತ ಸ್ಥಳಾವಕಾಶದ ಕೊರತೆ, ಕೆರೆ ಕುಂಟೆಗಳಲ್ಲಿ ತುಂಬಿರುವ ತ್ಯಾಜ್ಯ ಮುಂತಾದ ಸಮಸ್ಯೆಗಳು ನಾಗರಿಕರನ್ನು ಕಾಡುತ್ತಿವೆ. ಆದರೂ ನಗರದ ಬೆಳವಣಿಗೆಯಿಂದ ಪುಳಕಿತಗೊಂಡಿರುವ ಆಡಳಿತ ವ್ಯವಸ್ಥೆ ನಾಗರಿಕರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬದ್ಧತೆ ತೋರುತ್ತಿಲ್ಲ.

ಭಾರತದ ನಗರಗಳಲ್ಲಿ ಒಂದು ಸುಸ್ಥಿರ ಅಭಿವೃದ್ಧಿಯನ್ನು ಕಾಣಬೇಕೆಂದರೆ ಕಾನೂನು, ನಿಯಮ, ಆಡಳಿತ ನೀತಿ, ಹಣಕಾಸು, ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸಾಮಥ್ರ್ಯವನ್ನು ವೃದ್ಧಿಸುವುದೇ ಅಲ್ಲದೆ ಸಮರ್ಪಕವಾಗಿ ನಿರ್ವಹಿಸುವುದು ಸಹ ಅಗತ್ಯವಾಗಿರುತ್ತದೆ.

ಆದರೆ ಒಂದು ಸಮೀಕ್ಷೆಯ ಪ್ರಕಾರ ದೇಶದ ಎಲ್ಲ ನಗರಗಳೂ  ಸಹ ಈ ಮಾಪನಗಳ ನಿಟ್ಟಿನಲ್ಲಿ ಹಿನ್ನಡೆಯನ್ನೇ ಕಾಣುತ್ತಿವೆ. ಯೋಜನಾ ಬದ್ಧತೆ, ಪಾರದರ್ಶಕತೆ, ಸಾಮಥ್ರ್ಯದ ಸಮರ್ಪಕ ಬಳಕೆ ಮತ್ತು ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಸೋತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದಾಗ್ಯೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಮೇ 2016ರಲ್ಲಿ ಬೆಂಗಳೂರು ನೀಲಿನಕ್ಷೆ ಕಾರ್ಯಪಡೆಯನ್ನು ಸ್ಥಾಪಿಸಲಾಗಿದ್ದು ಬೆಂಗಳೂರಿನ ಜೀವನ ಶೈಲಿಯ ಗುಣಮಟ್ಟ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಸೂಚಿಸಲು ಕೋರಲಾಗಿದೆ.  ಮುಖ್ಯಮಂತ್ರಿಗಳ ನೇತೃತ್ವದ ಈ ಕಾರ್ಯಪಡೆಯಲ್ಲಿ  ಇನ್ಫೋಸಿಸ್ ನಾರಾಯಣ ಮೂರ್ತಿ, ಅಜಿಂ ಪ್ರೇಂಜಿ, ಕಿರಣ್ ಮಜೂಮ್ದಾರ್, ಸಚಿನ್ ಬನ್ಸಾಲ್, ಸ್ವಾತಿ ಮತ್ತು ರಮೇಶ್ ರಾಮನಾಥನ್, ಮೋಹನದಾಸ್ ಪೈ ಹಾಗೂ ಇತರ ನಗರಾಭಿವೃದ್ಧಿ ತಜ್ಞರು ಇದ್ದಾರೆ. ಆರು ಉಪ ಸಮಿತಿಗಳನ್ನೂ ಸಹ ರಚಿಸಲಾಗಿದೆ.

ಸಾರಿಗೆ ವ್ಯವಸ್ಥೆ, ಮೂಲ ಸೌಕರ್ಯಗಳು, ಕೆರೆ ಕುಂಟೆಗಳು, ತ್ಯಾಜ್ಯ ನಿರ್ವಹಣೆ, ಹಣಕಾಸು ಮತ್ತು ವಿದ್ಯುತ್ ಸೌಲಭ್ಯಗಳ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಲು ಈ ಉಪಸಮಿತಿಗಳು ನೆರವಾಗುತ್ತವೆ. ಬೆಂಗಳೂರನ್ನು ವಿಶ್ವದ ಅತ್ಯುತಮ ನಗರವನ್ನಾಗಿ ರೂಪಿಸಲು ಇದು ಸಕಾಲ.