ರಸ್ತೆ ಹೊಂಡ ರಿಪೇರಿಗೆ ವ್ಯಯಿಸಿರುವುದು ವೇಸ್ಟ್

ಮಹಾನಗರ ಪಾಲಿಕೆಯ ಎಲ್ಲಾ 60 ವಾರ್ಡುಗಳ ಮುಖ್ಯ ಹಾಗೂ ಒಳರಸ್ತೆಗಳ ಗುಂಡಿಗಳನ್ನು ಮುಚ್ಚಿ ತೇಪೆ ಹಾಕುವ ಕಾರ್ಯ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಮನಪಾ ಸಭೆಯಲ್ಲಿ ನಿರ್ಧರಿಸಿದಂತೆ ರಸ್ತೆ ಗುಂಡಿ ಮುಚ್ಚುವ ಕೆಲಸ ಕೆಲವು ಕಡೆಗಳಲ್ಲಿ ಪೂರ್ಣಗೊಂಡರೆ ಇನ್ನು ಕೆಲವೆಡೆ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲವು ಕಡೆ ತುಂಬಾ ಹದಗೆಟ್ಟ ರಸ್ತೆಗಳಿವೆ. ದೊಡ್ಡ ದೊಡ್ಡ ಹೊಂಡಗಳಿಂದ ತುಂಬಿವೆ. ರೂ. 3.29 ಕೋಟಿ ವೆಚ್ಚದಲ್ಲಿ 77 ರಸ್ತೆಗಳ ದುರಸ್ತಿಗೆ ಯೋಜನೆ ಹಾಕಲಾಗಿದೆ  11 ಇಂಜಿನಿಯರುಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಇದು ಒಳ್ಳೆಯದೇ  ಒಟ್ಟಿನಲ್ಲಿ ಈ ಬಾರಿಯಾದರೂ ಮನಪಾ ಬೇಗನೆ ಕಣ್ಣು ಬಿಟ್ಟಿದೆ ಆದರೇನು ಪ್ರಯೋಜನ   ಕೆಲವು ರಸ್ತೆಗಳಲ್ಲಿ ಅರ್ಧಂಬದ್ರ್ಧ ತೇಪೆ ಕಾಮಗಾರಿ ಮಾಡಲಾಗಿ ಇದು ಬಿಟ್ಟಿ ಕೆಲಸ ಮಾಡಿದಂತೆ ತೋರುತ್ತದೆ. ರಸ್ತೆಗಳಲ್ಲಿ ಇಷ್ಟೊಂದು ದೊಡ್ಡ ಸಣ್ಣ ಗುಂಡಿಗಳಿದ್ದರೂ ಸಹ ಕೆಲವು ಗುಂಡಿಗಳಿಗೆ ಮಾತ್ರ ತೇಪೆ ಹಾಕಲಾಗಿ ಉಳಿದವುಗಳನ್ನು ಬಿಡಲಾಗಿದೆ. ತೇಪೆ ಹಾಕಿದ ಗುಂಡಿಗಳಿಗೆ ರಿಪೇರಿ ಮಾಡಿದ್ದಲ್ಲೂ ಸಹ ವಾಹನಗಳಲ್ಲಿ ಸಂಚರಿಸುವಾಗ ದಡ ಬಡ ಶಬ್ದ ಬರುತ್ತಿದೆ. ಯಾಕೆಂದರೆ ರಸ್ತೆಯ ಮೇಲ್ಮೈ ಸರಿಯಾಗದೇ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.
ನಿಜಕ್ಕೂ ಇಂತಹ ತೇಪೆ ಮುಚ್ಚುವ ಕಾಮಗಾರಿಗಳಿಗೆ ಸಂಬಂಧಪಟ್ಟ ಕಾರ್ಪೋರೇಟರುಗಳೇ ಪ್ರಸ್ತಾವನೆಯನ್ನು ಮಳೆ ಮುಗಿದ ಕ್ಷಣವೇ ತಯಾರಿಸಿ ಮನಪಾಗೆ ಸಲ್ಲಿಸಬೇಕಾಗಿದೆ ಹಾಗೂ ರಸ್ತೆ ರಿಪೇರಿ ಕೆಲಸ ನವೆಂಬರ್‍ನೊಳಗೆ ಮುಗಿಸಬೇಕಾಗಿದೆ.

  • ಜೆ ಎಫ್ ಡಿಸೋಜ, ಅತ್ತಾವರ