ರಂಗೀನ್ `ರಂಗೂನ್’

ಕಳೆದ ಎರಡೂ ವರ್ಷ `ಅತ್ಯುತ್ತಮ ನಟಿ’ ನ್ಯಾಷನಲ್ ಅವಾರ್ಡ್ ಪಡೆದಿರುವ ಕಂಗನಾ ರನೌತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ರಂಗೂನ್’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಅದರಲ್ಲಿ ಕಂಗನಾ ಇಬ್ಬಿಬ್ಬರು ಸ್ಟಾರ್ಸ್ ಜೊತೆ ರಂಗಿನಾಟ ಆಡಿದ್ದು ಸಿನಿರಸಿಕರ ಕುತೂಹಲ ಕೆರಳಿಸಿದೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆಯುವ ಪ್ರೀತಿ ಮತ್ತು ಹೋರಾಟ ಕುರಿತ ಸಿನಿಮಾ ಇದಾಗಿದ್ದು ಸಮರದ ನಡುವೆಯೂ ಅರಳುವ ತ್ರಿಕೋನ ಪ್ರೀತಿಯ ವಿಭಿನ್ನ ಕತೆ ಇದಾಗಿದೆ. ಸಿನಿಮಾದಲ್ಲಿ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇವರಿಬ್ಬರೂ ಕಂಗನಾಳ ಪ್ರೇಮಪಾಶದಲ್ಲಿ ಬಿದ್ದಿರುವ ಹೀರೋಗಳಾಗಿದ್ದಾರೆ. `ರಂಗೂನ್’ ಸಿನಿಮಾದ ಚಿತ್ರೀಕರಣ ಮ್ಯಾನ್ಮಾರ್ ರಾಜಧಾನಿ ಆಗಿದ್ದ `ರಂಗೂನ್’ ನಲ್ಲಿ ನಡೆದಿದೆ.
`ಓಂಕಾರ’, `ಹೈದರ್’, ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ವಿಶಾಲ್ ಭಾರದ್ವಜ್ `ರಂಗೂನ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದ ಹಾಗೆ ಸೈಫ್ `ಓಂಕಾರ’ ಚಿತ್ರದಲ್ಲಿ ವಿಶಾಲ್ ಭಾರದ್ವಾಜ್ ಜೊತೆ ಈ ಮೊದಲೇ ಕೆಲಸ ಮಾಡಿದ್ದರೆ ಶಾಹೀದ್ ಭಾರದ್ವಾಜರ `ಹೈದರ್’ ಚಿತ್ರದ ಹೀರೋ ಆಗಿದ್ದು ಇನ್ನೊಂದು ವಿಶೇಷ. ಚಿತ್ರ ಫೆಬ್ರವರಿ 24ರಂದು ತೆರೆ ಮೇಲೆ ಬರಲಿದೆ.