ಮತೀಯ ರಾಜಕೀಯ ಪಕ್ಷಗಳಿಂದಲೇ ಜಿಲ್ಲೆಯಲ್ಲಿ ಕೊಲೆಗಳು ನಡೆದಿವೆ : ರೈ

ಜಿಲ್ಲೆಯಲ್ಲಿ ಮುಂದುವರಿದಿರುವ ಕೋಮು ಉದ್ವಿಗ್ನ ಪರಿಸ್ಥಿತಿ ಹಾಗೂ ಬಿಜೆಪಿ ತನ್ನನ್ನೇ ಗುರಿಯಾಗಿರಿಸಿರುವ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿವರಿಸಿದ್ದು ಹೀಗೆ…

  • ದಕ್ಷಿಣ ಕನ್ನಡ ಹೂಡಿಕೆಗೆ ಯೋಗ್ಯವಲ್ಲದ ಜಿಲ್ಲೆಯಾಗಲು ಕಾರಣವೇನು ?

ಎಲ್ಲೇ ಆಗಲಿ ಸಮಾಜದಲ್ಲಿ ಎರಡು ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಿದ್ದರೆ, ಆ ಪ್ರದೇಶದ ಅಭಿವೃದ್ಧಿಯಾಗದು. ನಂಬಿಕೆ ಹೆಸರಲ್ಲಿ ಜನರು ಹೋರಾಟ ಮುಂದುವರಿಸಿದ್ದರಿಂದ ದ ಕ ಜಿಲ್ಲೆಯ ಅಭಿವೃದ್ಧಿ ಹಿಂದುಳಿದಿದೆ.

  • ಉಸ್ತುವಾರಿ ಸಚಿವರಾಗಿದ್ದೂ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೋಮು ದಳ್ಳುರಿ ಆರಿಸಲು ವಿಫಲರಾಗಿದ್ದೀರಿ ?

ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕೋಮು ವಿಭಜಿಸುವಂತಹ ಸ್ಥಿತಿ ನೋಡುತ್ತಿದ್ದೇವೆ. ಆದರೆ ಇತ್ತೀಚಿನ ಘಟನೆಗಳು ಮಾತ್ರ ಹಿಂದಿನ ಘಟನೆಗಳಿಗಿಂತ ಭಿನ್ನವಾಗಿವೆ. ನಿಜವಾಗಿ ನೋಡಿದರೆ ಜಿಲ್ಲೆಯಲ್ಲಿ ಕೋಮು ಗಲಭೆ ಇಲ್ಲ. ಯೋಜನಾಬದ್ಧ ದಾಳಿಯಿಂದ ಕೊಲೆಗಳು ನಡೆದಿವೆ. ಕೊಲೆ ಪ್ರಕರಣ ಬಗೆಹರಿಸಲು ಪೊಲೀಸರು ಸಮರ್ಥರಾಗಿದ್ದರೂ, ಎರಡೂ ಕಡೆಯ ಕೋಮುವಾದಿಗಳಿಗೆ ಇದು ಬೇಕಿಲ್ಲ. `ಆರೋಪಿಗಳನ್ನು ಸೆರೆ ಹಿಡಿಯದಿದ್ದರೆ ಜಿಲ್ಲೆ ಉರಿಯಲಿದೆ’ ಎಂದು ಬಿಜೆಪಿ ಸಂಸದ ನಳಿನ್ ಹೇಳಿದ್ದು ನೆನಪಿಲ್ಲವೇ ?

  • ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದರೂ ನಾವೀಗಲೂ ಕಷ್ಟದಲ್ಲಿರಬೇಕಾದ ಅನಿವಾರ್ಯತೆಗೆ ಕಾರಣವೇನು ?

ರಾಜಕೀಯ ಲಾಭದ ಒಂದೇ ಉದ್ದೇಶ ಹೊಂದಿರುವ ವಿಪಕ್ಷಗಳು ಪ್ರತಿ ಸಂದರ್ಭದಲ್ಲೂ ನನ್ನ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ ಮುಂದುವರಿಸಿವೆ. ಬಿಜೆಪಿ ಆಡಳಿತಾವಧಿಯಲ್ಲಿ ಚರ್ಚುಗಳು, ಕ್ರಿಶ್ಚಿಯನ್ನರು, ಹೋಂಸ್ಟೇಗಳಲ್ಲಿ ಯುವಜನಾಂಗದ ಮೇಲೆ ದಾಳಿ ನಡೆದಿಲ್ಲವೇ ? ಶರತ್ ಮಡಿವಾಳ, ಅಶ್ರಫ್, ಪ್ರವೀಣ್ ಪೂಜಾರಿ, ವಿನಾಯಕ ಬಾಳಿಗಾ, ಜಲೀಲ್ ಕರೊಪಾಡಿ ಕೊಲೆಗಳಿಗೆ ಬಿಜೆಪಿ ಮತ್ತು ಎಸ್ಡಿಪಿಐಯಂತಹ ಕೋಮುವಾದಿ ರಾಜಕೀಯ ಪಕ್ಷಗಳು ಕಾರಣವಾಗಿವೆ.

  • ದ ಕ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೋಮುಗಲಭೆ ಪರಿಣಾಮವಾಗಿ ನೀವು ಈ ಬಾರಿ ಗೃಹ ಸಚಿವ ಸ್ಥಾನದಿಂದ ವಂಚಿತರಾಗಿದ್ದೀರಿ ?

ಇಲ್ಲ, ಹಾಗೇನೂ ಆಗಿಲ್ಲ, ಅದೆಲ್ಲ ಸುಳ್ಳು. ಸಂಪುಟ ವಿಸ್ತರಣೆ ಸೀಎಂಗೆ ಬಿಟ್ಟ ವಿಷಯ. ಬೆಂಗಳೂರು ಶಾಸಕರೊಬ್ಬರು ಗೃಹ ಸಚಿವರಾಗಬೇಕೆಂದು ಅವರು ಅಂದುಕೊಂಡಿರಬಹುದು. ನಾನೀಗ ನನ್ನ ಕ್ಷೇತ್ರದ ಕೆಲಸ ನಡೆಸಲು ಮುಕ್ತನಾಗಿದ್ದೇನೆ.

  • ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಗಳಿಸುವಲ್ಲಿ ಕಾಂಗ್ರೆಸ್ಸಿಗೆ ಎಸ್ಡಿಪಿಐ ಅಡ್ಡಿಯಾಗಲಿದೆ ?

ದ ಕ ಜಿಲ್ಲೆಯಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಕಾಂಗ್ರೆಸ್, ಲೋಕಸಭೆಯಲ್ಲಿ ಕ್ಷೇತ್ರ ಕಳೆದುಕೊಂಡಿದೆ. ಜಿ ಪಂ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ನೀಡಿರುವ ನಾವು, ಬಹುತೇಕ ಸಮಾನ ಸೀಟುಗಳಲ್ಲಿ ಗೆದ್ದಿದ್ದೇವೆ. ಈಗ ದಿನದಿನಕ್ಕೂ ಕಾಂಗ್ರೆಸ್ ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಸರ್ಕಾರ `ಅಚ್ಚೇ ದಿನ’ದ ಪೊಳ್ಳು ಭರವಸೆಗಳಿಗೆ ತಕ್ಕುದಾದ ಉತ್ತರ ನೀಡಲು ರಾಜ್ಯದ ಜನತೆ ಕಾದು ನೋಡುತ್ತಿದೆ. ಎಸ್ಡಿಪಿಐಗೆ ಮತ ನೀಡಿದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ ಎಂಬುದು ಮುಸ್ಲಿಮರಿಗೆ ತಿಳಿದಿದೆ.

  • ಕಲ್ಲಡ್ಕರ ಶಾಲೆಯ ಅನುದಾನ ರದ್ದುಪಡಿಸಿದ್ದು ನೀವೆಂಬ ಆರೋಪ ಕೇಳಿ ಬರುತ್ತಿದೆ ?

ನನ್ನ ಕ್ಷೇತ್ರದಲ್ಲಿ ಏನೇ ನಡೆದರೂ ಅವರು (ಕಲ್ಲಡ್ಕ) ನನ್ನ ವಿರುದ್ಧ ಆರೋಪಿಸುತ್ತಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಲ್ಲಡ್ಕರ ಶಾಲೆಗಳಿಗೆ ಬರುತ್ತಿದ್ದ ಹಣಕಾಸಿಗೆ ತಡೆಯಾದಾಗ ಅದಕ್ಕೆ ನಾನೇ ಕಾರಣ ಎಂದರು. ಕಲ್ಲಡ್ಕರದ್ದು ಸರ್ಕಾರಿ ಅನುದಾನಿತ ಶಾಲೆ. ಅದಕ್ಕೆ ಸರ್ಕಾರ ವೇತನ ನೀಡುತ್ತಿದೆ. ಸರ್ಕಾರಕ್ಕೆ ಪತ್ರ ಬರೆದರೆ ಇಂದೇ ಆ ಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಶಾಲಾ ಮಕ್ಕಳಿಗೆ ಊಟ ನೀಡುವ ಉದ್ದೇಶವಿಲ್ಲದ ಅವರು, ಬರೇ ಹಣ ಕಬಳಿಸುವ ಉದ್ದೇಶವಿಟ್ಟುಕೊಂಡಿದ್ದಾರೆ. ಅವರು ಶಾಲೆಯನ್ನು ರಾಜಕೀಯ ಅಜೆಂಡಾವಾಗಿ ಬಳಸಿಕೊಂಡಿದ್ದಾರೆ.

  • ಎತ್ತಿನಹೊಳೆ ಯೋಜನೆ ವಿಷಯದಲ್ಲಿ ನಿಮ್ಮ ಸರ್ಕಾರದಿಂದ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ ?

ಅದು ಬಿಜೆಪಿ ಯೋಜನೆ. ಯೋಜನೆ ಬಗ್ಗೆ ಹೇಳಿಕೆ ನೀಡಲು ನಾನು ತಾಂತ್ರಿಕ ತಜ್ಞನಲ್ಲ. ಅದು ಸರ್ಕಾರಿ ಪ್ರಾಜೆಕ್ಟ್. ಸಂಪುಟದಲ್ಲಿ ಸಚಿವನೊಬ್ಬನಾಗಿ ನಾನು ಸರ್ಕಾರದ ಪ್ರಾಜೆಕ್ಟ್ ವಿರೋಧಿಸುವಂತಿಲ್ಲ. ಯೋಜನೆ ಪ್ರಸ್ತಾವಿಸಿದ ಸಂದರ್ಭದಲ್ಲಿ ನಾನು ಶಾಸಕನೂ ಆಗಿರಲಿಲ್ಲ.