ಭಾರೀ ಮಳೆಗೆ ಬಂಟ್ವಾಳದ ಸರ್ವಿಸ್ ರಸ್ತೆ ಜಲಾವೃತ

ಬಂಟ್ವಾಳ : ತಾಲೂಕಿನಲ್ಲಿ ಹಿಂಗಾರು ಚುರುಕುಗೊಂಡಿದ್ದು, ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ತಾಲೂಕಿನ ಬಿ ಸಿ ರೋಡಿನಲ್ಲಿ ಚರಂಡಿ ಕಾಮಗಾರಿ ಮುಗಿದಿದ್ದರೂ ಮಳೆ ನೀರು ಹರಿಯಲು ವೈಜ್ಞಾನಿಕ ವ್ಯವಸ್ಥೆ ಮಾತ್ರ ಇನ್ನೂ ಸರಿಯಾಗಿ ಆಗಿಲ್ಲ. ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಭಾರೀ ಮಳೆಗೆ ಬಿ ಸಿ ರೋಡಿನ ಸರ್ವಿಸ್ ರಸ್ತೆಯಿಡೀ ಕೃತಕ ನೆರೆಯಿಂದ ಆವೃತವಾದ ದೃಶ್ಯ ಕಂಡುಬಂತು.

ಇಲ್ಲಿನ ಚರಂಡಿ ಕಾಮಗಾರಿ ಇತ್ತೀಚೆಗಷ್ಟೆ ಮುಕ್ತಾಯಗೊಂಡಿತ್ತು. ಇದೀಗ ಸರ್ವಿಸ್ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಸಾಗುತ್ತಿದೆ. ಇದೀಗ ಮಳೆಯಿಂದಾಗಿ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ಸಂಪೂರ್ಣ ಸರ್ವಿಸ್ ರಸ್ತೆಯನ್ನು ಆವರಿಸಿಕೊಂಡಿತ್ತು. ಕಾಂಕ್ರಿಟೀಕರಣ ಕಾರಣದಿಂದ ಜನ ಹೆಚ್ಚಿನ ಬವಣೆ ಅನುಭವಿಸುವುದು ಮಾತ್ರ ತಪ್ಪಿ ಹೋಗಿದೆ. ಆದರೆ ಈ ಭಾಗದಲ್ಲಿರುವ ಅಂಗಡಿ ಮಾಲಕರು ಮಾತ್ರ ದ್ವೀಪದ ಮಧ್ಯೆ ಕುಳಿತ ಪರಿಸ್ಥಿತಿಯನ್ನು ಎದುರಿಸುವಂತಾಯಿತು. ರಸ್ತೆಯಿಡೀ ಮಳೆ ನೀರು ಮೊಣಕಾಲೆತ್ತರಕ್ಕೆ ನಿಂತಿದ್ದರಿಂದ ಗ್ರಾಹಕರು ಅಂಗಡಿಗೆ ತೆರಳದ ಕಾರಣದಿಂದ ವ್ಯವಹಾರ ಇಲ್ಲದೆ ಅಂಗಡಿ ಮಾಲಕರು ಬಸವಳಿದ ದೃಶ್ಯ ಕಂಡುಬಂತು.