ಬೆಂಗಳೂರು ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ : ಪುರಾವೆ ಇಲ್ಲ ಎಂದ ಪೊಲೀಸ್ ಕಮಿಷನರ್

ಬೆಂಗಳೂರು : ರಾಜಧಾನಿಯಲ್ಲಿ ಹೊಸ ವರ್ಷಾಗಮನದ ಆಚರಣೆ ಸಂದರ್ಭ ಯುವತಿಯರ ಮೇಲೆ ನಡೆದಿದೆಯೆನ್ನಲಾದ ಸಾಮೂಹಿಕ ಲೈಂಗಿಕ ಕಿರುಕುಳಕ್ಕೆ ಯಾವುದೇ ಪುರಾವೆ  ದೊರೆತಿಲ್ಲ ಹಾಗೂ  ಈ ಬಗ್ಗೆ ಇಲ್ಲಿಯ ತನಕ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲದೇ ಇದ್ದರೂ ಮಾಧ್ಯಮ ವರದಿಗಳನ್ನು ಆಧರಿಸಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ  ಪ್ರವೀಣ್ ಸೂದ್ ತಿಳಿಸಿದ್ದಾರೆ.

ಪೊಲೀಸರು ಲಭ್ಯವಿರುವ ಎಲ್ಲಾ ಸೀಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ವರದಿಗಳನ್ನು ದೃಢೀಕರಿಸುವಂತಹ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಸೂದ್ ಹೇಳಿದ್ದಾರೆ.

ಆದರೆ ಸ್ಥಳೀಯ ಮಾಧ್ಯಮಗಳು ಪ್ರಸ್ತುತಪಡಿಸಿದ ವರದಿಗಳÀಲ್ಲಿ ಸಂತ್ರಸ್ತ ಯುವತಿಯರು ತಮಗೆ ಕಿರುಕುಳ ನೀಡುತ್ತಿರುವವರಿಂದ ದೂರ ಓಡಲು ಯತ್ನಿಸುತ್ತಿರುವ ದೃಶ್ಯಗಳಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿನ ವೀಡಿಯೊಗಳಲ್ಲಿ ಯುವತಿಯರು  ಸಹಾಯಕ್ಕಾಗಿ ಬೊಬ್ಬಿಡುತ್ತಿರುವ ದೃಶ್ಯಗಳಿವೆ.

ಬೆಂಗಳೂರಿನ ಈ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು ಕಳೆದ ವರ್ಷ ಜರ್ಮನ್ ನಗರ ಕೊಲೊನ್ ಎಂಬಲ್ಲಿ ಹೊಸ ವರ್ಷಾಚರಣೆ ಸಂದರ್ಭ ನಡೆದ ಲೈಂಗಿಕ ಹಲ್ಲೆಗಳಿಗೆ ಇದನ್ನು ಹೋಲಿಸಲಾಗಿದೆ.