ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಪೂಜೆ ಇರಕೂಡದು

ರಾಜಕಾರಣಿಗಳ ವ್ಯಕ್ತಿಪೂಜೆ ಪ್ರಜಾತಂತ್ರಕ್ಕೆ ಮಾರಕ. ರಾಷ್ಟ್ರಮಟ್ಟದಲ್ಲಿ ವ್ಯಕ್ತಿಪೂಜೆಗೊಳಗಾದವರಲ್ಲಿ ಇಂದಿರಾಗಾಂಧಿಯ ನಂತರ ನರೇಂದ್ರ ಮೋದಿ ಮಾತ್ರವೇ ಎನ್ನಬಹುದು. ಮೋದಿಯನ್ನು ಟೀಕಿಸುವ ಯಾರೇ ಆದರೂ ದೇಶದ್ರೋಹಿಯಾಗುತ್ತಾರೆ ಎಂದು ಒಬ್ಬ ಬಿಜೆಪಿ ಮುಖ್ಯಮಂತ್ರಿ ಫರ್ಮಾನು ಹೊರಡಿಸಿದ್ದಾರೆ.

* ರಾಮಚಂದ್ರ ಗುಹಾ
………….
ರಾಷ್ಟ್ರಮಟ್ಟದಲ್ಲಿ ಒಂದು ಪಂಥಾಭಿಮಾನ ಸೃಷ್ಟಿಸಿರುವ ನರೇಂದ್ರ ಮೋದಿಗೂ ಮುನ್ನ ಇದೇ ಸ್ಥಾನಪಡೆದಿದ್ದವರು ಇಂದಿರಾಗಾಂಧಿ ಒಬ್ಬರೇ. 2005ರಲ್ಲಿ ಗುಜರಾತಿನ ಪತ್ರಕರ್ತರೊಬ್ಬರು  ಅಭಿವೃದ್ಧಿ ಎಂಬ ಅಸ್ತ್ರದ ಬಳಕೆಯಿಂದ 2002ರ ನೆನಪುಗಳನ್ನು ತೊಳೆದುಹಾಕಲು ನರೇಂದ್ರ ಮೋದಿ ಬಯಸಿದ್ದಾರೆ ಎಂದು ಹೇಳಿದ್ದರು. ತಮ್ಮ ರಾಜ್ಯದಲ್ಲಿ ಹೊಸ ಮೂಲ ಸೌಕರ್ಯಗಳು ಮತ್ತು ಕೈಗಾರಿಕಾ ಘಟಕಗಳ ಬಗ್ಗೆ ಮುಂದಾಲೋಚನೆ ನಡೆಸಿದ್ದ ನರೇಂದ್ರ ಮೋದಿ ಸ್ವತಃ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಪ್ರಚಾರಾಂದೋಲನವನ್ನು ಹಮ್ಮಿಕೊಂಡಿದ್ದರು. ಗುಜರಾತ್ ರಾಜ್ಯದ ಅಭಿವೃದ್ಧಿಯನ್ನು ಕುರಿತ ಎಲ್ಲ ಪುಸ್ತಕ  ಜಾಹೀರಾತು ಮತ್ತು ಕರಪತ್ರಗಳಲ್ಲಿ ಮೋದಿಯ ಭಾವಚಿತ್ರ ರಾರಾಜಿಸುತ್ತಿತ್ತು. 2014ರ ನಂತರ ಇದೇ ಮಾದರಿಯನ್ನು ರಾಷ್ಟ್ರಮಟ್ಟದಲ್ಲಿ ಮೋದಿ ಅನುಸರಿಸುತ್ತಿದ್ದಾರೆ  ಚುನಾವಣೆಗೆ ಮುನ್ನವೇ ಸಾಮಾಜಿಕ ತಾಣಗಳ ಮೂಲಕ ಮತ್ತು ಭಾಷಣಗಳ ಮೂಲಕ ಮೋದಿಯ ವೈಭವೀಕರಣ ಪ್ರಕ್ರಿಯೆಗೆ ಚಾಲ್ತಿ ದೊರೆತಿತ್ತು. ವ್ಯಕ್ತಿಪೂಜೆಯನ್ನು ಸದಾ ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ನರೇಂದ್ರ ಮೋದಿಯ ಪ್ರಾಬಲ್ಯಕ್ಕೆ ಮಣಿಯಲೇ ಬೇಕಾಯಿತು. ಮೋದಿ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರವೂ ಪ್ರಧಾನಿಗಳ ಕುರ್ಚಿಗೆ ಸಂಪೂರ್ಣ ಶರಣಾಗತಿಯಾಗಿದೆ.
ವ್ಯಕ್ತಿಪೂಜೆ ಭಾರತದಲ್ಲಿ ಹೊಸ ವಿದ್ಯಮಾನವೇನಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಕರನ್ನು ಆರಾಧಿಸುವುದು ಇಲ್ಲಿ ಸರ್ವೇ ಸಾಮಾನ್ಯ ಸಂಗತಿ. ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರಿಗೆ ಸಂದಿರುವ ಗೌರವವೇ ಇದಕ್ಕೆ ಸಾಕ್ಷಿ. ಈ ಕನ್ಮಣಿಗಳ ವಿರುದ್ಧ ಟೀಕೆ ಮಾಡುವುದೂ ತಪ್ಪಾಗುತ್ತದೆ. ಆದರೆ ಬ್ರಿಟನ್ನಿನ ಟೆನಿಸ್ ತಾರೆ ಆಂಡಿ ಮರೆ  ನೊಬೆಲ್ ಪ್ರಶಸ್ತಿ ವಿಜೇತ ಬಾಬ್ ಡೈಲಾನ್ ಎಷ್ಟೇ ಪ್ರಸಿದ್ಧರಾದರೂ ಟೀಕೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಇದು ಊಹಿಸಲಸಾಧ್ಯ
ಕ್ರೀಡಾಪಟುಗಳ ವ್ಯಕ್ತಿಪೂಜೆ ಅಪ್ರಬುದ್ಧವಾದದ್ದು. ಆದರೆ ರಾಜಕಾರಣಿಗಳ ವ್ಯಕ್ತಿಪೂಜೆ ಪ್ರಜಾತಂತ್ರಕ್ಕೆ ಮಾರಕವಾಗುತ್ತದೆ. 19 ಮತ್ತು 20ನೆಯ ಶತಮಾನದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಸಾಮಾಜಿಕ ಸುಧಾರಣೆಯ ಕೇಂದ್ರ ಬಿಂದುಗಳಾಗಿದ್ದವು. ಲಿಂಗ ಸಮಾನತೆ  ವೈಚಾರಿಕ ಚಿಂತನೆ ಮತ್ತು ವ್ಯಕ್ತಿಗತ ಹಕ್ಕುಗಳಿಗೆ ಇಲ್ಲಿ ಮಾನ್ಯತೆ ದೊರೆತಿತ್ತು. ಆದರೂ ಇತ್ತೀಚಿನ ವರ್ಷಗಳಲ್ಲಿ ಬಾಳ ಥಾಕರೆ  ಜಯಲಲಿತಾ ಮುಂತಾದ ರಾಜಕೀಯ ನಾಯಕರ ಆರಾಧನೆ ಪರಾಕಾಷ್ಠೆ ತಲುಪಿರುವುದನ್ನು ಕಾಣಬಹುದು.
ಆದರೂ ರಾಷ್ಟ್ರಮಟ್ಟದಲ್ಲಿ ವ್ಯಕ್ತಿಪೂಜೆಗೊಳಗಾದವರಲ್ಲಿ ಇಂದಿರಾಗಾಂಧಿಯ ನಂತರ ನರೇಂದ್ರ ಮೋದಿ ಮಾತ್ರವೇ ಎನ್ನಬಹುದು. ಅಂದಿನ ದಿನಗಳಂತೆಯೇ ಇಂದೂ ಸಹ ಆಡಳಿತಾರೂಢ ಪಕ್ಷದ ರಾಜಕಾರಣಿಗಳು, ಪ್ರಧಾನಿ ಮೋದಿಯನ್ನು ಕೇವಲ ಪಕ್ಷದ ಅಥವಾ ಸರ್ಕಾರದ ಪ್ರತಿನಿಧಿ ಎಂದು ನೋಡದೆ ಇಡೀ ರಾಷ್ಟ್ರದ ಏಕಾಧಿಪತಿಯಂತೆ ಕಾಣಲು ಬಯಸುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಭಕ್ತರು ಈ ವ್ಯಕ್ತಿಪೂಜೆಗೆ ಶರಣಾಗಿದ್ದಾರೆ. ಒಬ್ಬ ಹಿರಿಯ ಸಚಿವರು ಮೋದಿಯನ್ನು `ಪ್ರವಾದಿ’ ಎಂದೂ ಬಣ್ಣಿಸಿದ್ದಾರೆ. ಮೋದಿಯನ್ನು ಟೀಕಿಸುವ ಯಾರೇ ಆದರೂ ದೇಶದ್ರೋಹಿಯಾಗುತ್ತಾರೆ ಎಂದು ಒಬ್ಬ ಬಿಜೆಪಿ ಮುಖ್ಯಮಂತ್ರಿ ಫರ್ಮಾನು ಹೊರಡಿಸಿದ್ದಾರೆ. ನರೇಂದ್ರ ಮೋದಿಯ ಈ ವ್ಯಕ್ತಿ ಆರಾಧನೆಯನ್ನು ಗಮನಿಸುತ್ತಿದ್ದರೆ ಇಬ್ಬರು ಚಿಂತಕ-ರಾಜಕಾರಣಿಗಳ ಎರಡು ಪುಸ್ತಕಗಳು ನೆನಪಿಗೆ ಬರುತ್ತವೆ. ಜವಹರಲಾಲ್ ನೆಹರೂ 1937ರಲ್ಲಿ ರಚಿಸಿದ ಚಾಣಕ್ಯ  ಎಂಬ ಕೃತಿಯಲ್ಲಿ ತಮ್ಮನ್ನು ತೃತೀಯ ವ್ಯಕ್ತಿಯಂತೆ ಸಂಬೋಧಿಸುವ ನೆಹರೂ  ಜವಹರಲಾಲ್ ಎಂದೂ ಫ್ಯಾಸಿಸ್ಟ್ ಆಗಲಾರ  ಆದರೆ ಸರ್ವಾಧಿಕಾರಿಯಾಗುವ ಎಲ್ಲ ಲಕ್ಷಣಗಳೂ ಅವನಲ್ಲಿವೆ  ಜನಪ್ರಿಯತೆ  ಧ್ಯೇಯ ಸಾಧಿಸುವ ಛಲ ಮತ್ತು ಸಾಮಥ್ರ್ಯ ಶಕ್ತಿ  ಹೆಮ್ಮೆ  ಸಂಘಟನಾ ಸಾಮಥ್ರ್ಯ  ಕಠಿಣ ನಿಲುವು ಮತ್ತು ಜನತೆಯ ಮೇಲಿನ ಅಭಿಮಾನ ಇವೆಲ್ಲವೂ ಅವರಲ್ಲಿವೆ ಎಂದು ಹೇಳಿದ್ದರು. ನೆಹರೂ ಇಲ್ಲಿ ತಮಗೆ ತಾವೇ ಎಚ್ಚರಿಕೆಯನ್ನು ನೀಡಿದ್ದರು.
ನಂತರ ಸಂವಿಧಾನ ರಚನಾ ಮಂಡಲಿಯಲ್ಲಿ ಭಾಷಣ ಮಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ಜಾನ್ ಸ್ಟುವರ್ಟ್ ಮಿಲ್ ಅವರನ್ನು ಉಲ್ಲೇಖಿಸುತ್ತಾ  ಜನಸಾಮಾನ್ಯರು ಯಾವುದೇ ನಾಯಕನ ಪಾದದಡಿ ತಮ್ಮ ಸ್ವಾತಂತ್ರ್ಯವನ್ನು ಒತ್ತೆ ಇಡಬಾರದು ಅಥವಾ ಅತಿಯಾದ ಅಧಿಕಾರ ನೀಡಿ ವಿಶ್ವಾಸ ಇರಿಸಬಾರದು. ಹಾಗಾದಲ್ಲಿ ಅಂತಹ ವ್ಯಕ್ತಿಗಳು ತಾವು ಪ್ರತಿನಿಧಿಸುವ ಸಂಸ್ಥೆಗಳನ್ನೇ ಮೆಟ್ಟಿ ನಿಲ್ಲುತ್ತಾರೆ  ಎಂದು ಹೇಳಿದ್ದರು.
ದೇಶದ ಹಿತಾಸಕ್ತಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಿಗೆ ಕೃತಜ್ಞರಾಗಿರುವುದು ತಪ್ಪಲ್ಲ  ಆದರೆ ಕೃತಜ್ಞತೆ ಅತಿಯಾದರೆ ತಪ್ಪಾಗುತ್ತದೆ  ಎಂದು ಹೇಳಿದ್ದ ಅಂಬೇಡ್ಕರ್, `ಭಕ್ತಿ ಮತ್ತು ವ್ಯಕ್ತಿ ಆರಾಧನೆ ವಿಶ್ವದ ಇತರ ಯಾವುದೇ ದೇಶಗಳಿಗಿಂತಲೂ ಭಾರತದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಪ್ರಜಾತಂತ್ರ ವ್ಯವಸ್ಥೆಯ ವಿನಾಶಕ್ಕೆ ಕಾರಣವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ  ಎಂದು ಎಚ್ಚರಿಸಿದ್ದರು.
ಈ ಎಚ್ಚರಿಕೆಯ ಮಾತುಗಳು ಇಂದಿರಾಗಾಂಧಿಯ ಆಳ್ವಿಕೆಯಲ್ಲಿ ಮತ್ತು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮರುಕಳಿಸಿದ್ದವು. ಇಂದಿನ ಭಾರತ ಒಬ್ಬ ವ್ಯಕ್ತಿಯ ಸರ್ವಾಧಿಕಾರಿ ಧೋರಣೆಯಿಂದ ವಿನಾಶವಾಗುವುದಿಲ್ಲ. ಆದರೆ ಪ್ರಜಾತಂತ್ರ ವ್ಯವಸ್ಥೆ ಖಂಡಿತವಾಗಿಯೂ ಅಪಾಯಕ್ಕೊಳಗಾಗುತ್ತದೆ. ಹಾಗಾಗಿಯೇ ನರೇಂದ್ರ ಮೋದಿಯ ವ್ಯಕ್ತಿಪೂಜೆಯ ಭರಾಟೆಗೆ ಇತಿಶ್ರೀ ಹಾಡುವುದು ಅನಿವಾರ್ಯವಾಗಿದೆ.