ಪತ್ನಿ ಚುಡಾಯಿಸಿದವರಿಗೆ ಹಲ್ಲೆಗೈದ ಪೇದೆ ಅಮಾನತು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಪತ್ನಿಯನ್ನು ಚುಡಾಯಿಸಿದ್ದ ವ್ಯಕ್ತಿಗೆ ಹಲ್ಲೆ ಮಾಡಿದ ಕಾರಣಕ್ಕೆ ಮಲ್ಪೆ ಪೊಲೀಸ್ ಠಾಣೆಯ ಕಾನಸ್ಟೆಬಲ್ ಪ್ರಕಾಶ್ ಅಮಾನತುಗೊಂಡಿದ್ದಾರೆ. ಎಸ್ಪಿ ಕೆ ಟಿ ಬಾಲಕೃಷ್ಣ ಅವರು ರಾಜಕೀಯ ಒತ್ತಡಕ್ಕೊಳಗಾಗಿ ತನ್ನನ್ನು ಅಮಾನತು ಮಾಡಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಫಿಶ್ಮಿಲ್ ಕಂಪೆನಿಯಲ್ಲಿರುವ ಕಾರ್ಮಿಕರಿಬ್ಬರು ಕಾನಸ್ಟೆಬಲ್ ಪ್ರಕಾಶ್ ಅವರ ಪತ್ನಿಯನ್ನು ಚುಡಾಯಿಸಿದ್ದರು. ಪ್ರಕಾಶ್ ಮತ್ತು ಅವರ ಗರ್ಭಿಣಿ ಪತ್ನಿ ಔಷಧಕ್ಕೆಂದು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚುಡಾಯಿಸಿದ್ದರು. ಇದನ್ನು ಆಕ್ಷೇಪಿಸಿ ಕೈಯಿಂದ ಹಲ್ಲೆ ನಡೆಸಿದ್ದೆ. ಬಳಿಕ ಪತ್ನಿಯಿಂದ ದೂರು ಕೊಡಿಸಿದ್ದೆ. ಆದರೆ ನನ್ನ ದೂರನ್ನು ಸ್ವೀಕರಿಸಲಿಲ್ಲ. ಆದರೆ ಚುಡಾಯಿಸಿದವರು ಸಚಿವರ ಕಂಪೆನಿಯಲ್ಲಿ ಕೆಲಸ ಮಾಡುವವರಾಗಿದ್ದು, ಅವರ ಒತ್ತಡದ ಮೇಲೆ ಕೇಸು ದಾಖಲಿಸದಂತೆ ಮಾಡಿ, ನನ್ನ ವಿರುದ್ಧವೇ ದೂರು ದಾಖಲಿಸುವಂತೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಇದೀಗ ಎಸ್ಪಿ ಮೂಲಕ ಒತ್ತಡ ಹೇರಿ ನನ್ನನ್ನು ಅಮಾನತು ಮಾಡಿದ್ದಾರೆ ಎಂದು ಪ್ರಕಾಶ್ ಹೇಳಿರುವ ಆಡಿಯೋ ವೈರಲ್ ಆಗಿದೆ.