ಪಡುಬಿದ್ರೆ ಸಂಚಾರ ವ್ಯವಸ್ಥೆಗೆ ಪೊಲೀಸರಿಂದ ತಿಲಾಂಜಲಿ

 

10pdb1

ಇಕ್ಕಟ್ಟಾದ ಪಡುಬಿದ್ರಿ ಮುಖ್ಯ ಪೇಟೆಯ ಸಂಚಾರ ಅವ್ಯವಸ್ಥೆಯನ್ನು ಕಣ್ಣಾರೆ ಕಂಡ ಅಂದಿನ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಪೇಟೆಯ ಮಧ್ಯಭಾಗ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟು ಟೇಪ್ ಕಟ್ಟಿ ತಾತ್ಕಾಲಿಕ ರಸ್ತೆ ವಿಭಜಕ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಇದೀಗ ಅವರು ವರ್ಗಾವಣೆಗೊಳ್ಳುತ್ತಿದಂತೆ ಅವರು ಮಾಡಿದ ಸಂಚಾರ ವ್ಯವಸ್ಥೆಯನ್ನು ನಿರ್ವಾಹಿಸಲಾಗದೆ ಆ ವ್ಯವಸ್ಥೆಯನ್ನು ಪಡುಬಿದ್ರಿ ಪೊಲೀಸರು ನುಂಗಿ ನೀರು ಕುಡಿದಿದ್ದಾರೆ.
ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗಾವಣೆಯಾಗಿ ಹೋಗುತ್ತಿದಂತೆ ಅವರು ನಡೆಸಿದ ಸಂಚಾರ ವ್ಯವಸ್ಥೆಯೂ ಕುಸಿಯ ತೊಡಗಿ, ಹೆದ್ದಾರಿಗಂಟಿಕೊಂಡೇ ವಾಹನ ಪಾರ್ಕ್ ನಡೆಸಿದರೂ ಅವರನ್ನು ಕೇಳುವವರೇ ಇಲ್ಲವಾಗಿ ಮತ್ತೆ ಅದೇ ಹಿಂದಿನ ಸ್ಥಿತಿಯತ್ತ ಮರಳತೊಡಗಿತ್ತು.

ಮರೆಯಾಗುತ್ತಿದೆ ವಿಭಜಕ

ಪಾರ್ಕಿಂಗ್ ಅವ್ಯವಸ್ಥೆಯ ಮಧ್ಯೆಯೂ ರಸ್ತೆ ವಿಭಜಕ ಇದೆ ಎಂಬ ಕೊಂಚ ಸಮಾಧಾನ ವಿದ್ದರೂ ಇದೀಗ ಎಸ್ಸೈ ಅಜ್ಮತಾಲಿ ಪಡುಬಿದ್ರಿ ಠಾಣೆಯಿಂದ ವರ್ಗಾವಣೆಯಾಗುತ್ತಿದಂತೆ ವಿಭಜಕದ ಟೇಪಿಗೂ ಬಿತ್ತು ಕತ್ತರಿ.

ಕೈ ಎತ್ತಿದ ಪೊಲೀಸ್
ಇದೀಗ ವಿಭಜಕದ ಟೇಪ್ ಸಂಪೂರ್ಣ ತುಂಡಾಗಿ ವಿಭಜಕದ ಮಧ್ಯಭಾಗದಲ್ಲೇ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದು, ಪಡುಬಿದ್ರಿ ಮುಖ್ಯ ಪೇಟೆ ಪ್ರದೇಶದ ವಾಹನ ಸಂಚಾರ ಅಪಾಯಕಾರಿಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪಡುಬಿದ್ರಿ ಪೊಲೀಸರ ಗಮನಕ್ಕೆ ತಂದರೆ ಪೊಲೀಸ್ ಪೇದೆಯೋರ್ವನ ಉತ್ತರ  ದಿನನಿತ್ಯ ಕಟ್ಟಿದ ಟೇಪನ್ನು ಕತ್ತರಿಸುತ್ತಾರೆ ನಾವು ಎಷ್ಟು ಬಾರಿ ಕಟ್ಟಲಿ ನಮ್ಮಿಂದ ಸಾಧ್ಯವಿಲ್ಲ  ನಮ್ಮ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಡಬಲ್ ಡ್ಯೂಟಿ ಮಾಡುತ್ತಿದ್ದೇವೆ. ನಾವು ಕೂಡಾ ಮನುಷ್ಯರು ಎಂಬುದಾಗಿ ಉಢಾಪೆಯಾಗಿ ವರ್ತಿಸಿದ್ದಾರೆ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಗಳ ಕೊರತೆಯನ್ನು ಮುಂದಿಸಿಕೊಂಡು ಆಗುತ್ತಿರುವ ಅಪರಾಧಗಳನ್ನು ಕಣ್ಣಾರೆ ನೋಡುತ್ತಿದ್ದರೂ ಅದರ ಬಗ್ಗೆ ಕ್ರಮ ಜರಗಿಸಲು ಹಿಂದೇಟು ಹಾಕುತ್ತಿರುವ ಪೊಲೀಸರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿ. ಎಸ್ಸೈ ಅಜ್ಮತಾಲಿಯವರು ವರ್ಗಾವಣೆಗೊಂಡು ಒಂದು ತಿಂಗಳು ಕಳೆದರೂ ಅವರ ಸ್ಥಾನ ಭರ್ತಿಯಾಗಿಲ್ಲ. ಅವರ ತೆರವಾದ ಜಾಗಕ್ಕೆ ಸೂಕ್ತ ಅಧಿಕಾರಿಯನ್ನು ಅತೀ ಶೀಘ್ರವಾಗಿ ನೇಮಿಸುವ ಮೂಲಕ ಇಲ್ಲಿನ ಅವ್ಯವಸ್ಥೆಯನ್ನು ದುರಸ್ಥಿ ಪಡಿಸಬೇಕು.