ನಾನು ಹೆಂಡತಿಗೆ ಮೋಸ ಮಾಡಬಾರದಿತ್ತು

ಪ್ರ : ಮದುವೆಯಾಗಿ ಒಬ್ಬ ಮಗನಿದ್ದಾನೆ. ಮದುವೆಯಾಗುವಾಗ ನಾನು ಒಬ್ಬರು ರಿಯಲ್ ಎಸ್ಟೇಟ್ ಬಿಸಿನೆಸ್ ಇರುವವರಿಗೆ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದೆ. ಅವರು ಎಂಟು ಸಾವಿರ ಸಂಬಳ ಕೊಡುತ್ತಿದ್ದರು. ನನ್ನ ಹೆಂಡತಿ ನೋಡಲು ಚೆನ್ನಾಗಿಲ್ಲ. ನನ್ನ ಫೆಂಡ್ಸ್ ಎಲ್ಲರೂ ನನ್ನನ್ನು ಫಿಲ್ಮ್ ಸ್ಟಾರ್ ಹಾಗಿದ್ದೀ ಅನ್ನುತ್ತಿದ್ದರು. ಆದರೂ ನಾನು ಅವಳ ಶ್ರೀಮಂತಿಕೆ ನೋಡಿಯೇ ಮದುವೆಯಾಗಿದ್ದು ಅಂತ ಹೇಳಲು ನನಗೇನೂ ಸಂಕೋಚವಿಲ್ಲ. ಮಾವ ಕೊಟ್ಟ ಹಣದಿಂದ ಮದುವೆಯಾದ ಒಂದು ವರ್ಷಕ್ಕೇ ನನ್ನದೇ ಬಿಸಿನೆಸ್ ಪ್ರಾರಂಭಿಸಿದೆ. ಎರಡು ವರ್ಷದಲ್ಲೇ ನನ್ನ ಬಿಸಿನೆಸ್ ಒಳ್ಳೆಯ ರೀತಿಯಲ್ಲಿ ನಡೆಯಲು ಪ್ರಾರಂಭವಾಯಿತು. ದೊಡ್ಡ ಕಾರು, ಬಂಗಲೆ ಎಲ್ಲವನ್ನೂ ಕೊಂಡುಕೊಂಡೆ. ಅದೇ ಸಮಯದಲ್ಲಿ ನಮ್ಮ ಆಫೀಸಿಗೆ ರಿಸೆಪ್ಷನಿಸ್ಟಾಗಿ ಒಬ್ಬಳು ಚೆಂದುಳ್ಳಿ ಚೆಲುವೆ ಸೇರಿಕೊಂಡಳು. ಸ್ವಲ್ಪವೂ ಗ್ಲಾಮರ್ ಇಲ್ಲದ ಹೆಂಡತಿಯ ಜೊತೆ ಸಂಸಾರ ಮಾಡಿ ಬೋರಾಗಿದ್ದ ನನಗೆ ಈ ಹುಡುಗಿ ಸಿಕ್ಕಿದ್ದು ಬಹಳ ಖುಶಿಯಾಯಿತು. ಅವಳೂ ಅಷ್ಟೇ. ಯಾವುದರಲ್ಲೂ ಮಡಿವಂತಿಕೆ ಇಲ್ಲ. ಜೀವನವನ್ನು ಎಂಜಾಯ್ ಮಾಡುವುದೇ ಅವಳ ಗುರಿ. ನಮ್ಮಿಬ್ಬರ ತಿರುಗಾಟ ಎಗ್ಗಿಲ್ಲದೇ ಸಾಗಿತು. ಎಲ್ಲದಕ್ಕೂ ಖುಶಿಯಿಂದಲೇ ಕಂಪೆನಿ ಕೊಡುತ್ತಿದ್ದಳು. ಮನೆಯಲ್ಲಿ ಸಿಗದ ಸುಖವನ್ನು ಇವಳಲ್ಲಿ ಪಡೆದುಕೊಂಡು ಹಾಯಾಗಿದ್ದೆ. ಅವಳಿಗೆ ನಾನು ಕೊಟ್ಟ ದುಬಾರಿ ಗಿಫ್ಟ್ಸ್‍ಗಳಿಗೆ ಲೆಕ್ಕವಿಲ್ಲ. ಹೆಂಡತಿಗೆ ನನ್ನ ಮತ್ತು ಇವಳ ಸಂಬಂಧ ಗೊತ್ತಾದರೂ ಹೆಚ್ಚು ರಂಪಾಟ ಮಾಡಿಲ್ಲ. ಆದರೆ ಮೂರು ತಿಂಗಳ ಹಿಂದೆ ನಡೆದ ಆ ಆಕ್ಸಿಡೆಂಟ್ ನನ್ನ ಜೀವನಶೈಲಿಯನ್ನೇ ಬದಲಿಸಿಬಿಟ್ಟಿತು. ಈಗ ರಾಡ್ ಹಾಕಿದ ಕಾಲನ್ನು ಎತ್ತಿಡಲೂ ಸಹಾಯ ಬೇಕು. ಬಾತ್‍ರೂಮಿಗೂ ಹೆಂಡತಿಯ ಆಸರೆಯಿಲ್ಲದೇ ಹೋಗಲಾರೆ. ಹಣೆಗೆ ಬಿದ್ದ ಜೋರಾದ ಪೆಟ್ಟಿನಿಂದ ನನಗೀಗ ಮೊದಲಿನ ಅಂದವಿಲ್ಲ. ನನ್ನ ಆ ಹುಡುಗಿ ಒಮ್ಮೆ ಮಾತ್ರ ಹಾಸ್ಪಿಟಲ್ಲಿನಲ್ಲಿ ಭೇಟಿಯಾದವಳು ಮತ್ತೆ ಸಂಪರ್ಕಕ್ಕೇ ಸಿಗುತ್ತಿಲ್ಲ. ಅವಳೀಗ ಬೇರೆಯವರ ಹತ್ತಿರ ಕೆಲಸದಲ್ಲಿ ಇದ್ದಾಳೆ. ಇನ್ನೂ ಮೂರು ತಿಂಗಳು ನನಗೆ ಆಫೀಸಿಗೆ ಹೋಗಲೂ ಸಾಧ್ಯವಿಲ್ಲ. ಬಿಸಿನೆಸ್ ಕೂಡಾ ಮಾಡಲು ಈಗ ಆಗುತ್ತಿಲ್ಲ. ಆದರೆ ಹೆಂಡತಿ ಮಾತ್ರ ಸ್ವಲ್ಪವೂ ಬೇಸರಿಸಿಕೊಳ್ಳದೇ ನನ್ನ ಶುಶ್ರೂಶೆ ಮಾಡುತ್ತಿದ್ದಾಳೆ. ನಾನು ನನ್ನ ಹೆಂಡತಿಗೆ ಮೋಸ ಮಾಡಿ ದೊಡ್ಡ ತಪ್ಪು ಮಾಡಿದೆ ಅಂತ ಈಗ ಅನಿಸುತ್ತಿದೆ. ನನ್ನನ್ನು ದೇವರು ಕ್ಷಮಿಸುವನಾ?

ಉ : ಅದಕ್ಕೇ ಹೇಳುವುದು ಇಟ್ಟುಕೊಂಡವಳು ಇರುವ ತನಕ ಕಟ್ಟಿಕೊಂಡವಳು ಕಡೆಯ ತನಕ ಅಂತ. ಆ ಹುಡುಗಿಗೇನು ಇಷ್ಟರವರೆಗೆ ನಿಮ್ಮಲ್ಲಿ ಹಣವಿತ್ತು, ಓಡಾಡಿಸಲು ಕಾರಿತ್ತು. ನೋಡಲು ಬೇರೆ ಸುಂದರವಾಗಿದ್ದಿದ್ದಿರಿ. ಶಾಸ್ತ್ರವೂ ಆಯಿತು, ಸುಖವೂ ಸಿಕ್ಕಿತು ಅನ್ನುವಂತೆ ಬೇಕಷ್ಟು ಹಣದ ಜೊತೆಗೆ ಎಂಜಾಯ್‍ಮೆಂಟೂ ನಿಮ್ಮಿಂದ ಸಿಗುತ್ತಿತ್ತು. ಪ್ರೀತಿಯ ನಾಟಕವಾಡುತ್ತಿದ್ದಳು ಅಷ್ಟೇ. ಈಗ ನಿಮ್ಮಿಂದ ಅವಳಿಗೇನೂ ಸಿಗುವ ಚಾನ್ಸಸ್ ಇಲ್ಲ ಅಂತ ಗೊತ್ತಾದ ತಕ್ಷಣ ಬೇರೆ ಮಿಕ ಹುಡುಕಿಕೊಂಡು ಹೋಗಿದ್ದಾಳೆ. ಆದರೆ ನಿಮ್ಮ ವಿವೇಕಕ್ಕೆ ಏನಾಗಿತ್ತು? ನಿಮ್ಮ ಸ್ವಾರ್ಥಕ್ಕಾಗಿ ವರದಕ್ಷಿಣೆ ಹೇರಳವಾಗಿ ಸಿಗುತ್ತದೆ ಅಂತ ಹುಡುಗಿಯ ರೂಪವನ್ನೂ ಕಡೆಗಣಿಸಿ ಮದುವೆಯಾದಿರಿ. ಆದರೆ ಹೆಂಡತಿಗೆ ಒಳ್ಳೆಯ ಗಂಡ ಆಗಲಿಲ್ಲ ನೀವು. ಅವಳ ಹಣದಲ್ಲಿಯೇ ಬಿಸಿನೆಸ್ ಪ್ರಾರಂಭಿಸಿ ಒಂದು ಜನವೂ ಆದ ನೀವು ಕೊನೆಗೆ ಹತ್ತಿದ ಏಣಿಯನ್ನೇ ಕಡೆಗಣಿಸಿದಿರಿ. ಬಹುಶಃ ದೇವರಿಗೂ ನೀವು ಅವಳಿಗೆ ಮಾಡುತ್ತಿದ್ದ ಅನ್ಯಾಯ ಸಹಿಸಲು ಆಗಲಿಲ್ಲವೇನೋ. ನಿಮಗೆ ಬುದ್ಧಿ ಕಲಿಸಲೆಂದೇ ಅವನು ಈ ಶಿಕ್ಷೆ ನಿಮಗೆ ಕೊಟ್ಟಿರಬೇಕು. ನಿಮ್ಮ ಹೆಂಡತಿ ಮಾತ್ರ ಇನ್ನೂ ನಿಮ್ಮ ಬಗ್ಗೆ ಭರವಸೆ ಇಟ್ಟುಕೊಂಡು ನಿಮ್ಮ ಸೇವೆ ಮಾಡುತ್ತಿದ್ದಾಳೆ. ಅವಳಾದರೂ ಏನು ಮಾಡುತ್ತಾಳೆ, ದಾರಿ ತಪ್ಪಿದ ಗಂಡನನ್ನು ಸರಿಮಾಡಲೂ ಆಗದೇ, ತೊರೆಯಲೂ ಮನಸ್ಸು ಅಥವಾ ಧೈರ್ಯ ಬರದೇ ಒಳಗೊಳಗೇ ವೇದನೆ ಅನುಭವಿಸುತ್ತಿದ್ದಿರಬಹುದು. ಈಗಾದರೂ ನಿಮಗೆ ಬುದ್ಧಿ ಬಂತಲ್ಲಾ. ಹೆಂಡತಿಯ ಕೈಹಿಡಿದು ಕ್ಷಮೆ ಕೇಳಿ. ಮುಂದೆಂದೂ ಅವಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ಕೊಡಿ. ಇಷ್ಟು ದಿನ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ ಇನ್ನು ಮುಂದೆ ನೀವು ಅವಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ ಕಡಿಮೆಯೇ.