ನವೆಂಬರ್-15ರಂದು 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮ ಮಂಗಳೂರಿನಲ್ಲಿ

ಮಂಗಳೂರು : ಭಾರತದ ಸಹಕಾರ ಚಳುವಳಿ ಕಳೆದ 113 ವರ್ಷಗಳಿಂದ ರಾಷ್ಟ್ರದ ಆರ್ಥಿಕ-ಸಾಮಾಜಿಕ ಬೆಳವಣಿಗೆಗೆ ಶ್ರಮಿಸುತ್ತಾ ಬಂದಿದೆ. ಸಮಾಜದ ಎಲ್ಲಾ ವರ್ಗದ ಜನರಿಗೂ ಸಹಕಾರ ಕ್ಷೇತ್ರ `ಕಾಮಧೇನು’ವಾಗಿ ನೆರವಾಗಿದೆ. ಸಹಕಾರ ಅಭಿವೃದ್ಧಿಗೆ ವಿಶೇಷ ಅದ್ಯತೆಯನ್ನು ನೀಡಿದ ದಿವಂಗತ ಜನಹರಲಾಲ್ ನೆಹರೂ ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವಾದ ನವೆಂಬರ್-14ರಿಂದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತಿದೆ. ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ.
64ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು `ಸಹಕಾರ ಸಂಸ್ಥೆಗಳನ್ನು ಗಣಕೀಕರಣಗೊಳಿಸುವ ಮೂಲಕ ಜನರ ಸಬಲೀಕರಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಉದ್ದೇಶ `ಸಹಕಾರ ಸಂಸ್ಥೆಗಳು : ಉತ್ಪಾದಕರಿಂದ ಗ್ರಾಹಕರವರೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜನೆಯಾಗಿದೆ. ಸದ್ರಿ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರವನ್ನು ಪ್ರತಿಬಿಂಬಿಸುವ ಸ್ತಬ್ದ ಚಿತ್ರಗಳು, ಡೊಳ್ಳುಕುಣಿತ, ವೀರಗಾಸೆ, ಕೇರಳ ಚೆಂಡೆ, ಕಲ್ಲಡ್ಕ ಗೊಂಬೆ ಮುಂತಾದ 22 ವಿವಿಧ ಮನೋರಂಜನಾ ತಂಡಗಳೊಂದಿಗೆ ಅದ್ದೂರಿಯ `ಸಮುದಾಯದತ್ತ ಸಹಕಾರ ಜಾಥಾ’ ನಡೆಯಲಿದೆ. ಈ ಸಹಕಾರ ಜಾಥಾದಲ್ಲಿ ಸುಮಾರು 12,000ಕ್ಕೂ ಮಿಕ್ಕಿ ಸಹಕಾರಿಗಳು, ನವೋದಯ ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಉಭಯ ಜಿಲ್ಲೆಗಳ ಸಹಕಾರಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರವ ಸಹಕಾರಿ ಸಂಸ್ಥೆಗಳನ್ನು ಹಾಗೂ ಉತ್ತಮ ಸಹಕಾರಿಗಳನ್ನು ಗುರುತಿಸುವ ಕಾರ್ಯವು ನಡೆದಿದೆ ಎಂದು
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ ಬೆಂಗಳೂರು ಮತ್ತು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಇದರ ಅಧ್ಯಕ್ಷ ಎಂ ಎನ್ ರಾಜೇಂದ್ರಕುಮಾರ್ ತಿಳಿಸಿದ್ದಾರೆ.