ನಳಿನ್ ಸಾಧನೆ ಶೂನ್ಯ, ಶೋಭಾಗೆ ಕೊಡಗಿನಲ್ಲಿ 200 ಎಕ್ರೆ ಕಾಫಿ ತೋಟವಿದೆ : ರಮಾನಾಥ ರೈ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಾಧನೆಗಳನ್ನು ಜನರಿಗೆ ಹೇಳುವ ಕೆಲಸ ಆಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ಮೈಸೂರು ವಿಭಾಗದ ಉಸ್ತುವಾರಿ ಪಿ ಸಿ ವಿಷ್ಣುನಾಥನ್ ಹೇಳಿದರು.

ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಹಳೆಯಂಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, “ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಸರಕಾರ ಕಪ್ಪು ಹಣ ವಾಪಾಸು ತರುತ್ತೇನೆ ಎಂದು ಹೇಳಿ ಇನ್ನೂ ನುಡಿದಂತೆ ನಡೆದಿಲ್ಲ, ಮೋದಿ ಮಹಾನ್ ಸುಳ್ಳುಗಾರ” ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶಕುಮಾರ್ ವಹಿಸಿದ್ದರು. ಸಮಾರಂಭವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸಿ ಮಾತನಾಡಿ, “ಮತೀಯವಾದಿಗಳ ವಿರುದ್ಧ ಹೋರಾಟ ಮಾಡುವ ಸಂಕಲ್ಪ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಪಣತೊಡಬೇಕು, ಜಿಲ್ಲೆಯಲ್ಲಿ 2 ಮತೀಯ ಸಂಘಟನೆಗಳಾದ ಬಜರಂಗದಳ ಹಾಗೂ ಪಿಎಫೈ ಸಂಘಟನೆಗಳಿಂದ ನಿರಪರಾಧಿಗಳ ಹತ್ಯೆ ನಡೆದಿದೆ. ಕಾಂಗ್ರೆಸ್ಸಿನವರು ಜಾತ್ಯತೀತ ನಿಲುವನ್ನು ಒಗ್ಗೂಡಿಸಿಕೊಂಡು ಮತೀಯ ಸಂಘಟನೆಗಳನ್ನು ಒದ್ದೋಡಿಸಬೇಕು” ಎಂದು ಕರೆ ನೀಡಿದರು.

“ದಕ್ಷಿಣ ಜಿಲ್ಲೆಯಲ್ಲಿ ನಂ 1 ಸಂಸದ ಎಂದು ಹೇಳಿಕೊಂಡಿರುವ ನಳಿನ್ ಸಾಧನೆ ಶೂನ್ಯ” ಎಂದು ಹೇಳಿದ ಅವರು, “ಜಿಲ್ಲೆಯಲ್ಲಿ ಯಾವುದೇ ಕೆಲಸ ಮಾಡದೆ ನಂ 1 ಪಟ್ಟ ಹೇಗೆ ಸಾಧ್ಯ” ಎಂದು ಅಣಕವಾಡಿದರು.

“ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಲ್ಲಡ್ಕಕ್ಕೆ ಬಂದು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶೋಭಾಗೆ 200 ಎಕರೆ ಅಕ್ರಮ ಆಸ್ತಿ ಇದ್ದು, ಅದರ ಸ್ವಲ್ಪ ಭಾಗದಲ್ಲಿ ಕಲ್ಲಡ್ಕ ಶಾಲೆಯ ಮಕ್ಕಳಿಗೆ ಅನ್ನ ಕೊಡಲಿ, ಅದು ಬಿಟ್ಟು ಅನ್ನಕ್ಕಾಗಿ ಜೋಳಿಗೆ ಹಿಡಿದು ರಾಜಕೀಯ ಮಾಡುವುದು ಮೂರ್ಖತನದ  ಪರಮಾವಧಿ” ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವೇದಿಕೆಯಲ್ಲಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಅಭಯಚಂದ್ರ ಮಾತನಾಡಿ, “ಸರಕಾರ ನಡೆಸಿ ಕೋಟಿ ಕೋಟಿ ಹಣ ಲೂಟಿ ಮಾಡಿ ಜೈಲಿಗೆ ಹೋಗುವುದು ಬಿಜೆಪಿ ಸಂಸ್ಕøತಿ” ಎಂದು ವ್ಯಂಗ್ಯವಾಡಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಬಜೆಪಿಗರನ್ನು ಒದ್ದೋಡಿಸಬೇಕು ಎಂದು ಕರೆ ನೀಡಿದರು.