ನನ್ನ `ಡಿಂಪಲ್’ ನಿಂದಾಗಿ ನಾನೊಬ್ಬ ಗಂಭೀರ ನಟನಾಗಿಲ್ಲ : ಶಾರುಖ್

ಬಾಲಿವುಡ್ಡಿನ ಕಿಂಗ್ ಖಾನ್- ಶಾರುಖ್ ಖಾನ್ ಅವರಿಗೆ ವಯಸ್ಸು 51 ಆದರೂ ಇನ್ನೂ ಚಿತ್ರಜಗತ್ತಿನಲ್ಲಿ ಅವರು ಮಿಂಚುತ್ತಿರುವ ಪರಿ ಆಶ್ಚರ್ಯ ಹುಟ್ಟಿಸದೇ ಇರದು. ಅವರು ಈಗಲೂ ಬಾಲಿವುಡ್ಡಿನ ಫೇವರಿಟ್ ಹೀರೋ. ಕಳೆದ 25 ವರ್ಷಗಳಿಂದ ಬಾಲಿವುಡ್ಡಿನ ಸಾಮ್ರಾಜ್ಯವನ್ನು ಆಳುತ್ತಿರುವ ಈ ಕಿಂಗ್ ಖಾನ್ ಅವರ ಲೇಟೆಸ್ಟ್ ಚಿತ್ರ ರಾಯೀಸ್ ಜನವರಿ 25ರಂದು ಬಿಡುಗಡೆಗೆ ಸಿದ್ಧವಾಗಿದೆ. ಅವರೊಂದಿಗೆ ಮಾತನಾಡಿದಾಗ :
* ನಿಮ್ಮ ಪುತ್ರ ಆರ್ಯನ್ ಈಗ ಬೆಳೆದು ನಿಂತಿದ್ದಾನೆ. ನೀವು ಪರದೆ ಮೇಲೆ ರೊಮಾನ್ಸ್ ಮಾಡುವ ದೃಶ್ಯಗಳಿಗೆ ಆತ ಹೇಗೆ ಪ್ರತಿಕ್ರಿಯಿಸುತ್ತಾನೆ ?
ಆತ ಹುಡುಗಿಯರೊಂದಿಗೆ ರೊಮಾನ್ಸ್ ಮಾಡುವುದಕ್ಕೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆಂದು ಆತನಿಗೆ ತಿಳಿದಿಲ್ಲವೋ ಹಾಗೆಯೇ ನನಗೂ ಆತ ನನ್ನ ರೊಮಾನ್ಸ್ ದೃಶ್ಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆಂದು ತಿಳಿದಿಲ್ಲ. ನನ್ನ ಪಾತ್ರಗಳು ಆತನಿಗೆ ಇಷ್ಟವಾಗಿವೆಯೇ ಅಥವಾ ಇಲ್ಲವೇ ಎಂದು ನಾನು ಯಾವತ್ತೂ ಕೇಳಿಲ್ಲ. ಅದು ಅಪ್ರಸ್ತುತ ಕೂಡ ಹೌದು.
* ಆರ್ಯನ್ ನಿಮ್ಮ ಸಿನೆಮಾಗಳನ್ನು ವೀಕ್ಷಿಸುತ್ತಾನೆಯೇ ? ಏನಾದರೂ ಸಲಹೆಗಳನ್ನು ನೀಡುತ್ತಾನೆಯೇ ?
ಆತ ಒಬ್ಬ ಫಿಲ್ಮ್ ಮೇಕರ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದಾನೆ. ಒಮ್ಮೆ ಅವನು `ಜಾನೆ ಭಿ ದೊ ಯಾರೋ’ ಚಿತ್ರ ನೋಡುವಂತೆ ನಾನು ಹೇಳಿದೆ. ಆದರೆ ನಮಗೆ ಅದು ತಮಾಷೆ ಕಂಡಂತೆ ಆತನಿಗೆ ಕಂಡಿಲ್ಲ. ಈಗಿನ ಯುವಜನತೆಯ ದೃಷ್ಟಿಕೋನದ ಹಾಸ್ಯ ಬೇರೆಯೇ ಆಗಿದೆ. ನಾನು ನನ್ನ ಮಕ್ಕಳಿಂದ ಯಾವುದೇ ಸಲಹೆಗಳನ್ನು ಅವರು ನನ್ನ ಮಕ್ಕಳೆಂಬ ಒಂದೇ ಕಾರಣಕ್ಕೆ ಸ್ವೀಕರಿಸುತ್ತಿಲ್ಲ.
* `ರಾಯೀಸ್’ ನಂತಹ ಚಿತ್ರದಲ್ಲಿ ನಟಿಸಲು ನೀವೇಕೆ ಒಪ್ಪಿಕೊಂಡಿರಿ ?
ಚಿತ್ರದ ಸ್ಕ್ರಿಪ್ಟ್ ತುಂಬಾ ಚೆನ್ನಾಗಿತ್ತು. ಈ ಚಿತ್ರದ ಪಾತ್ರಧಾರಿ ತಪ್ಪುಗಳನ್ನು ಮಾಡಿದರೂ ಅವುಗಳಿಗೆಲ್ಲಾ ಹೊಣೆ ಹೊತ್ತುಕೊಳ್ಳುತ್ತಾನೆ.
* ನೀವು ಕಮರ್ಷಿಯಲ್ ಚಿತ್ರಗಳಿಗೆ ಹೆಚ್ಚು ಹೊಂದಿಕೆಯಾಗುವ ನಟ. `ರಾಯೀಸ್’ ನಂತಹ ವಾಸ್ತವಿಕತೆಗೆ ಹತ್ತಿರವಾದ ಚಿತ್ರವನ್ನು ಏಕೆ ಆಯ್ದುಕೊಂಡಿರಿ?
ಹೌದು ನಾನು ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಿಗೆ ಮೀಸಲಾದವನು. ಯಾರೂ ನನ್ನನ್ನು ಒಬ್ಬ ಗಂಭೀರ ನಟನೆಂದು ತಿಳಿದುಕೊಂಡೇ ಇಲ್ಲ. ಇದೇ ಕಾರಣಕ್ಕೆ ಗಂಭೀರ ಚಿತ್ರಗಳಾದ `ಸ್ವದೇಸ್’, `ಚಕ್ ದೇ ಇಂಡಿಯಾ’ ಮತ್ತು `ಪಹೇಲಿ’ ಅಷ್ಟೊಂದು ಯಶಸ್ಸು ಕಂಡಿಲ್ಲ. ಆದರೆ ನಾನೊಬ್ಬ ಕೆನ್ನೆಯಲ್ಲಿ ಗುಳಿಯಿರುವ ಅತ್ಯಂತ ಗಂಭೀರ ನಟ. ನನ್ನ ಕೆನ್ನೆಯ ಗುಳಿಗಳೇ ನನ್ನ ಗಂಭೀರ ಪಾತ್ರಗಳನ್ನು ಹಾಳುಗೆಡಹುತ್ತವೆ. ನನ್ನ `ಡಿಂಪಲ್’ ಇಲ್ಲದೇ ಹೋಗಿದ್ದಲ್ಲಿ ನೀವು ನನ್ನನ್ನು ನವಾಝುದ್ದೀನ್ (ಸಿದ್ದೀಖಿ) ಎಂದಂದುಕೊಳ್ಳುತ್ತೀರಿ.
* ನೀವೊಬ್ಬ ಸೂಪರ್ ಸ್ಟಾರ್ ಹಾಗೂ ಪಬ್ಲಿಕ್ ಫಿಗರ್. ಇದರ ಜತೆಗೆ ಬರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಿದ್ದೀರಿ ?
ಕೆಲವೊಮ್ಮೆ ಜನ ನಿಮ್ಮನ್ನು ಬಹಳ ಎತ್ತರಕ್ಕೇರಿಸಿದರೆ ಇನ್ನು ಕೆಲವೊಮ್ಮೆ ನಿಮ್ಮನ್ನು ಕೆಳಕ್ಕೆ ಬೀಳಿಸಬಹುದು. ನೀವು ಹೇಳಿದ ಅಥವಾ ಹೇಳದೇ ಇದ್ದಂತಹ ವಿಷಯಗಳಿಗೆ ನಿಮ್ಮನ್ನು ಹೊಣೆಯಾಗಿಸಲಾಗುತ್ತದೆ. ಇದೆಲ್ಲಾ ನಟನೊಬ್ಬನ ಜೀವನದ ಒಂದು ಭಾಗ. ನನಗೆ ಕೊಂಡಾಡುವಿಕೆ ಇಷ್ಟ. ಹಾಗಿರುವಾಗ ಅದರೊಂದಿಗೆ ಬರುವ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.
* ನಟರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತಿದೆಯೇ ?
ನಿಮ್ಮ ಮನಸ್ಸಿನಲ್ಲೇನಾದರೂ ಇದ್ದಲ್ಲಿ ಅದನ್ನು ಸರಿಯಾದ ವೇದಿಕೆಯಲ್ಲಿ ನೀವು ಹೊರಗೆಡಹಬೇಕೆಂಬುದು ನನ್ನ ಅನಿಸಿಕೆ. ಸಾಮಾಜಿಕ ಜಾಲತಾಣಗಳಲ್ಲೂ ನಿಮ್ಮ ಅಭಿಪ್ರಾಯ ಪ್ರಸ್ತುತಪಡಿಸಬಹುದು ಹಾಗೂ ಅದನ್ನೆತ್ತಿಕ್ಕೊಂಡು ಯಾರಾದರೂ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಬಹುದು. ಇಂದು ಎಲ್ಲರೂ ಏನನ್ನಾದರೂ ಮಾಡಿ ತೋರಿಸುವುದಕ್ಕಿಂತ ಕೇವಲ ಪ್ರತಿಕ್ರಿಯೆ ನೀಡುವುದಕ್ಕೇ ತಮ್ಮನ್ನು ಸೀಮಿತ ಗೊಳಿಸಿದ್ದಾರೆ.