ನನಗೀಗಲೇ ಮದುವೆಯಾಗಲು ಇಷ್ಟವಿಲ್ಲ

 ನೀವು ಭಾರತ ದೇಶದಲ್ಲೇ ಇದ್ದೀರಿ ಅನ್ನುವುದನ್ನು ಮರೆಯಬೇಡಿ. ಕೆಲವು ಸಿಟಿಯಲ್ಲಿದ್ದ ಹಾಗೆ ಲಿವ್-ಇನ್-ರಿಲೇಶನ್‍ಶಿಪ್ಪಿಗೆ ನಿಮ್ಮ ಆ ಹುಡುಗಿ ಒಪ್ಪಲು ಅವಳು ಅಷ್ಟು ಮುಂದುವರಿದಿರಲಿಕ್ಕಿಲ್ಲ.

ಪ್ರ : ನನಗೆ ಮೊದಲಿಂದಲೂ ಹುಡುಗಿಯರ ಜೊತೆ ಸ್ನೇಹ ಮಾಡಿಕೊಳ್ಳುವುದು ಬಲು ಇಷ್ಟ. ನನ್ನ ಮಾತಿನ ಮೋಡಿಗೆ ಹುಡುಗಿಯರು ಬೇಗ ಮರುಳಾಗುತ್ತಾರೆ. ಹುಡುಗರಿಗಿಂತ ಹೆಣ್ಣುಮಕ್ಕಳ ಜೊತೆಯೇ ನಾನು ಕಂಫರ್ಟ್ ಇರುತ್ತೇನೆ. ಕಾಲೇಜು ಬಿಟ್ಟು ಮೂರು ವರ್ಷವಾದರೂ ಅಲ್ಲಿದ್ದ ಕೆಲವು ಹುಡುಗಿಯರು ಇನ್ನೂ ನನ್ನ ಕಾಂಟೇಕ್ಟಿನಲ್ಲಿ ಇದ್ದಾರೆ. ಹಾಗಂತ ಯಾರ ಜೊತೆಯೂ ನನಗೆ ಬೇರೆ ರೀತಿಯ ಸಂಬಂಧವಿರಲಿಲ್ಲ. ಆದರೆ ಈಗ ಆರು ತಿಂಗಳಿಂದ ನನ್ನ ಕಲೀಗ್ ಒಬ್ಬಳು ನನ್ನನ್ನು ಪ್ರೀತಿಸುತ್ತಿದ್ದಾಳೆ. ಅವಳೇ ಪ್ರಪೋಸ್ ಮಾಡಿದಳು. ನಾನೂ ಅವಳೂ ಈಗ ಡೇಟಿಂಗ್ ಮಾಡುತ್ತಿದ್ದೇವೆ. ಆದರೆ ಈಗ ಒಂದು ತಿಂಗಳಿಂದ ನನಗೆ ಸ್ವಲ್ಪ ತಲೆಬಿಸಿಯಾಗಿದೆ. ಅವಳು ಮದುವೆಯಾಗೋಣ ಅನ್ನುತ್ತಿದ್ದಾಳೆ. ಅವಳ ಒಡನಾಟ ನನಗಿಷ್ಟವೇ. ಆದರೆ ನನಗೆ ಇಷ್ಟು ಬೇಗ ಮದುವೆಯಾಗಿ ಸಂಸಾರದ ಜವಾಬ್ದಾರಿ ಹೊರಲು ಮನಸ್ಸಿಲ್ಲ. ಅದೂ ಅಲ್ಲದೇ ಅವಳು ನನ್ನ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದಾಳೆ. ನನ್ನ ಮೊದಲಿನ ಸ್ನೇಹಿತೆಯರ ಹತ್ತಿರ ಮಾತಾಡುವುದು ಅವಳಿಗಿಷ್ಟವಿಲ್ಲ. ನನ್ನ ಸೆಲ್‍ಫೋನಿಗೆ ಬಂದ ಮೆಸೇಜಸ್‍ಗಳನ್ನೆಲ್ಲ ಓದುತ್ತಿರುತ್ತಾಳೆ. ಕೆಲವರು ಕಳಿಸಿದ ಪೋಲಿ ಜೋಕ್ಸ್‍ಗಳಿಗೆಲ್ಲ ವಿವರಣೆ ಕೇಳುತ್ತಾಳೆ. ನನಗೀಗ 25 ವರ್ಷ. ಅವಳಿಗೂ ನನ್ನ ವಯಸ್ಸೇ. ನನಗೆ ಅವಳ ಪ್ರೀತಿ ಬೇಕು, ಆದರೆ ಮದುವೆಯ ಬಂಧನ ಬೇಡ. ಹೇಗೆ ಇದನ್ನು ಅವಳಿಗೆ ತಿಳಿಸಲಿ?

: ನಿಮ್ಮ ಮನಸ್ಸಿನಲ್ಲಿ ಏನಿದೆ ಅಂತ ನಿಮಗೇ ಸರಿಯಾಗಿ ಅರ್ಥವಾದ ಹಾಗೆ ಅನಿಸುವುದಿಲ್ಲ. ನಿಮಗೆ ಈಗಲೇ ಮದುವೆ ಬೇಡವೇ ಅಥವಾ ನಿಮ್ಮನ್ನು ಪ್ರೀತಿಸುತ್ತಿದ್ದ ಆ ಹುಡುಗಿ ಜೊತೆ ಮದುವೆಯಾಗಲು ಇಷ್ಟವಿಲ್ಲವೇ? ನಿಮ್ಮ ಪತ್ರ ನೋಡಿದರೆ ಹುಡುಗಿಯ ಜೊತೆಗಿನ ಒಡನಾಟದ ಸವಿ ಬೇಕು, ಆದರೆ ಯಾವುದೇ ಕಮಿಟ್ಮೆಂಟ್ ಬೇಡ ಅಂತ ಅನಿಸುತ್ತದೆ. ನೀವು ಭಾರತ ದೇಶದಲ್ಲೇ ಇದ್ದೀರಿ ಅನ್ನುವುದನ್ನು ಮರೆಯಬೇಡಿ. ಕೆಲವು ಸಿಟಿಯಲ್ಲಿದ್ದ ಹಾಗೆ ಲಿವ್-ಇನ್-ರಿಲೇಶನ್‍ಶಿಪ್‍ಗೆ ನಿಮ್ಮ ಆ ಹುಡುಗಿ ಒಪ್ಪಲು ಅವಳು ಅಷ್ಟು ಮುಂದುವರಿದಿರಲಿಕ್ಕಿಲ್ಲ. ಅವಳಿಗೂ ಈಗ ಮದುವೆ ವಯಸ್ಸು. ಎಷ್ಟು ದಿನಾಂತ ಅವಳೂ ಕಾಯುತ್ತಾಳೆ? ಅವಳನ್ನು ಮುಂದೆಯಾದರೂ ಹೆಂಡತಿಯಾಗಿ ಪಡೆಯಲು ನಿಮಗೆ ಮನಸ್ಸಿದ್ದರೆ ಒಂದು ಸಮಯಮಿತಿಯಾದರೂ ಆಕೆಗೆ ನೀಡಿ. ಅವಳು ಕಾಯಬಹುದು. ಅವಳು ನಿಮ್ಮನ್ನು ಮನಸಾರೆ ಇಷ್ಟಪಡುವುದರಿಂದಲೇ ಮದುವೆಗೆ ಒತ್ತಾಯಿಸುತ್ತಿದ್ದಾಳೆ. ಪ್ರೀತಿಸಿದವನ ಬಗ್ಗೆ ಎಲ್ಲರಿಗಿರುವ ಹಾಗೆ ಅವಳಿಗೂ ನಿಮ್ಮ ಬಗ್ಗೆ ಪೊಸೆಸಿವ್ನೆಸ್ ಇದೆ. ಆ ಗುಣ ನಿಮಗಿಷ್ಟವಿಲ್ಲವಾದರೆ, ನಿಮಗೆ ಬಿಂದಾಸ್ ಹುಡುಗಿಯೇ ಬೇಕೆಂದಿದ್ದರೆ ಈಗಲೇ ಸಂಬಂಧ ಕಡಿದುಕೊಳ್ಳಿ. ಆದರೆ ಈ ರೀತಿ ಅವಳನ್ನು ಕತ್ತಲಲ್ಲಿಡುವುದು ಸರಿಯಲ್ಲ.