ತವರಿನವರನ್ನು ಅವಮಾನಿಸುವುದು ಸರಿಯೇ?

ಪ್ರ : ನಾನೊಂದು ಆಫೀಸಿನಲ್ಲಿ ನಮ್ಮ ಬಾಸಿನ ಸೆಕ್ರೆಟರಿಯಾಗಿದ್ದೆ. ನಾನು ಅಂತಹ ರೂಪವತಿಯೇನಲ್ಲ. ಬಾಸ್ ಪ್ರತಿಯೊಂದಕ್ಕೂ ನನ್ನನ್ನೇ ಕೇಳುತ್ತಿದ್ದುದು ನನಗೆ ಹೆಮ್ಮೆಯ ವಿಷಯವಾಗಿತ್ತು. ಕೆಲವೊಮ್ಮೆ ಅವರು ಕ್ಲೈಂಟ್ಸ್ ಮೀಟಾಗಲೂ ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಯುವ, ಚಾರ್ಮಿಂಗ್ ಬಾಸ್ ಜೊತೆ ಕಾರಿನಲ್ಲಿ ಹೋಗುವುದು ಖುಶಿಯೆನಿಸುತ್ತಿತ್ತು. ನಮ್ಮ ನಡುವೆ ಸಲುಗೆಯೂ ಬೆಳೆಯಿತು. ಆಫೀಸಿನಲ್ಲೆಲ್ಲ ಗುಸುಗುಸು ಶುರುವಾಯಿತು. ಕಲೀಗ್ಸ್ ತನ್ನನ್ನು ಆಡಿಕೊಳ್ಳಬಾರದೆಂದು ಅವರು ನನ್ನನ್ನು ಮದುವೆಯೂ ಆದರು. ಆದರೆ ಅವರ ತಾಯಿಗೆ ಈ ಮದುವೆ ಸ್ವಲ್ಪವೂ ಇಷ್ಟವಿರಲಿಲ್ಲ. ಅವರಿಗೆ ತಮ್ಮ ಸರೀಕರನ್ನೇ ಸೊಸೆಯನ್ನಾಗಿ ಮಾಡಿಕೊಳ್ಳುವ ಆಸೆಯಿತ್ತು. ಅವರೀಗ ಆ ಕೋಪವನ್ನು ನನ್ನ ಮತ್ತು ನನ್ನ ತವರಿನವರ ಮೇಲೆ ತೆಗೆಯುತ್ತಿದ್ದಾರೆ. ನನ್ನನ್ನು ಕೆಲಸದವರ ರೀತಿಯಲ್ಲಿ ಟ್ರೀಟ್ ಮಾಡುತ್ತಿದ್ದಾರೆ. ನನ್ನ ಅಪ್ಪ, ಅಮ್ಮನನ್ನೂ ಅಷ್ಟೇ. ಅಪರೂಪಕ್ಕೊಮ್ಮೆ ನನ್ನನ್ನು ನೋಡಲು ಅವರು ಬಂದಾಗಲೂ ಡೈನಿಂಗ್ ಟೇಬಲ್ಲಿನಲ್ಲಿ ಊಟವನ್ನೂ ಬಡಿಸುತ್ತಿಲ್ಲ. ಅವರು ಮನೆಕೆಲಸದವರ ರೀತಿ ಮೂಲೆಯಲ್ಲಿ ಕುಳಿತು ಊಟ ಮಾಡಬೇಕು. ನನ್ನ ಗಂಡನೂ ಅಷ್ಟೇ. ಅವರನ್ನು ಅತ್ತೆ, ಮಾವನ ತರಹ ಗೌರವಿಸುತ್ತಿಲ್ಲ. ನಮ್ಮ ಮನೆಯಲ್ಲಿ ನಡೆಯುವ ಯಾವ ಫಂಕ್ಷನ್ನಿಗೂ ಅವರನ್ನು ಕರೆಯುತ್ತಿಲ್ಲ. ನನ್ನ ಬಗ್ಗೆಯೂ ಅಸಡ್ಡೆ ಇದ್ದರೂ ಹಾಸಿಗೆಯಲ್ಲಾದರೂ ನಾನು ಬೇಕಲ್ಲ. ಅದಕ್ಕೆ ಸಹಿಸಿಕೊಂಡವರ ಹಾಗೆ ಕಾಣುತ್ತಾರೆ. ಮೊದಲಿನ ಪ್ರೀತಿಯೂ ಅವರಲ್ಲೀಗ ಇಲ್ಲ. ಹೊರಗಡೆ ಯಾವ ಪಾರ್ಟಿಗೂ ನನ್ನನ್ನು ಒಯ್ಯುತ್ತಿಲ್ಲ. ಅವರು ಬರುವುದು ಬೇಡ ಅಂದಿದ್ದರಿಂದ ಈಗ ನಾನು ಕಚೇರಿಗೂ ಹೋಗುತ್ತಿಲ್ಲ. ಅವರ ಬೇಕು, ಬೇಡಗಳನ್ನು ಪೂರೈಸಿಕೊಂಡು ಅತ್ತೆ ಹೇಳಿದ ಕೆಲಸ ಮಾಡಿಕೊಂಡು ಮನೆಯಲ್ಲಿಯೇ ಇದ್ದೇನೆ. ರೂಪ, ಅಂತಸ್ತು, ವಿದ್ಯೆ ಯಾವುದರಲ್ಲೂ ನಾನು ಅವರಿಗೆ ಸರಿಸಮಾನಳಲ್ಲ ಅಂತ ನನಗೂ ಗೊತ್ತು. ಹಾಗಂತ ನನಗೂ ನಮ್ಮ ಮನೆಯವರಿಗೂ ಆತ್ಮಾಭಿಮಾನ ಇಲ್ಲವೇ? ಅಮ್ಮ, ಅಪ್ಪನನ್ನು ನೋಡಲು ನಾನೇ ಈಗ ಅಪರೂಪಕ್ಕೊಮ್ಮೆ ಕದ್ದುಮುಚ್ಚಿ ಹೋಗಿ ಬರುತ್ತಿದ್ದೇನೆ. ಅವರ ಜೊತೆಗೆ ಸಂಪರ್ಕ ಇಟ್ಟುಕೊಳ್ಳುವುದೂ ಇವರಿಗಿಷ್ಟವಿಲ್ಲ. ಅವರೀಗ ನಮ್ಮ ಮನೆಗೆ ಬರುವುದನ್ನೂ ನಿಲ್ಲಿಸಿದ್ದಾರೆ. ನನಗೂ ಅವರನ್ನು ಅವಮಾನಿಸುವುದನ್ನು ನೋಡಲು ಕಷ್ಟವಾಗುತ್ತಿದೆ. ಯಾಕಾದರೂ ಈ ಚಿನ್ನದ ಪಂಜರದಲ್ಲಿ ಸಿಲುಕಿಕೊಂಡೆನೋ ಅನಿಸುತ್ತಿದೆ. ಇಲ್ಲಿ ಯಾರಿಗೂ ಮನುಷ್ಯತ್ವವೇ ಇಲ್ಲ. ಹೇಗೆ ಇದನ್ನೆಲ್ಲ ಸಹಿಸಿಕೊಂಡಿರಲಿ?

ಉ : ಕೆಲವರಿಗೆ ದುಡ್ಡಿನ ಮದ ತಲೆಗೆ ಅಡರಿರುತ್ತದೆ. ಹಣದ ಎದುರು ಅವರಿಗೆ ಸಂಬಂಧಗಳೆಲ್ಲ ಗೌಣ. ಬಹುಶಃ ತನ್ನಂತಹ ಸಚ್ಚಾರಿತ್ರ್ಯವಂತ ಯಾರೂ ಇಲ್ಲ ಅಂತ ಹೊರಜಗತ್ತಿಗೆ ತೋರಿಸಿಕೊಳ್ಳಲು ನಿಮ್ಮನ್ನು ಮದುವೆಯಾಗಿರಬೇಕು. ನೀವೂ ಪ್ರಾಯದ ಅಮಲಿನಲ್ಲಿ ಆಗ ವಿವೇಕ ಕಳೆದುಕೊಂಡುಬಿಟ್ಟಿದ್ದಿರಿ. ಸರೀಕರನ್ನೇ ಮದುವೆಯಾಗದಿದ್ದರೆ ಹೆಚ್ಚಿನ ಕಡೆ ಆಗುವ ಕಷ್ಟ ಇದೇ. ಅಹಂಕಾರದಲ್ಲಿ ಮೆರೆಯುವವರನ್ನು ನಿರ್ಬಂಧಿಸುವವರು ಯಾರು? ನಿಮ್ಮ ಗಂಡನಾದರೂ ಸರಿಯಿದ್ದಿದ್ದರೆ ನಿಮಗೆ ಸಮಸ್ಯೆ ಇರುತ್ತಿರಲಿಲ್ಲ. ಅವರೂ ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಯಾರ ಬಳಿ ಹೇಳಿಕೊಳ್ಳುತ್ತೀರಿ ನಿಮ್ಮ ಕಷ್ಟವನ್ನು? ಗಂಡನನ್ನು ಪ್ರೀತಿಯಿಂದ ಗೆಲ್ಲಲು ಸಾಧ್ಯವಾ ಅಂತ ನೋಡಿ. ನಿಮ್ಮ ಬಗ್ಗೆ ಗೌರವವಿರುವ ಯಾರಾದರೂ ಅವರ ಕುಟುಂಬದಲ್ಲಿ ಇದ್ದಾರಾ? ಹಾಗಿದ್ದರೆ ಅವರ ಸಹಾಯದಿಂದ ನಿಮ್ಮ ಗಂಡ ಮತ್ತು ಅವರ ಮನೆಯವರಿಗೆ ಹಾಗೆ ನಡೆದುಕೊಳ್ಳುವುದು ಸರಿಯಲ್ಲ ಅಂತ ಹೇಳಿಸಬಹುದು. ಇಲ್ಲದಿದ್ದರೆ ನೀವೇ ನಿಮ್ಮ ಗಂಡನ ಮೇಲೊಂದು ರಾಮಬಾಣ ಬಿಡಿ. ಅವರು ಈ ರೀತಿ ನಿಮ್ಮ ಮತ್ತು ನಿಮ್ಮ ತವರಿನವರನ್ನು ಅಸಡ್ಡೆಯಾಗಿ ಕಂಡರೆ ಡೈವೋರ್ಸ್ ಕೊಟ್ಟು ಹೋಗುವುದಾಗಿ ಹೆದರಿಸಿ. ಅವರು ಸಮಾಜಕ್ಕೆ ಅಂಜುವವರಾದ್ದರಿಂದ ತನ್ನ ಮರ್ಯಾದೆ ಕಡಿಮೆಯಾಗುತ್ತದೆ ಅನ್ನುವ ಭಾವನೆಯಿಂದಲಾದರೂ ನಿಮಗೆ ಮತ್ತು ನಿಮ್ಮ ಅಪ್ಪ, ಅಮ್ಮನಿಗೆ ಸ್ವಲ್ಪವಾದರೂ ಗೌರವ ತೋರಿಸಬಹುದು. ತನ್ನ ತಾಯಿಗೂ ಬುದ್ಧಿ ಹೇಳಬಹುದು. ಅಷ್ಟಕ್ಕೂ ಅವರು ತನ್ನ ಹಿರಿಮೆಯನ್ನೇ ಮೆರೆಸಲು ಹೋದರೆ, ನಿಮಗೆ ಅಲ್ಲಿ ಬಾಳುವುದು ಅಸಹನೀಯವೆನಿಸಿದರೆ ಆ ಮನೆಯಿಂದ ಹೊರಬಂದು ಆತ್ಮಾಭಿಮಾನದಿಂದ ಬದುಕುವುದೇ ಒಳ್ಳೆಯದು. ಹೇಗೂ ನಿಮಗೆ ಹೊರಗಡೆ ಕೆಲಸ ಮಾಡಿದ ಅನುಭವವಿದೆ.