ತಮ್ಮನ ಹೆಂಡತಿ ಮೇಲೆ ಆಕರ್ಷಣೆ

ಪ್ರ : ನನಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ವಯಸ್ಸು 40. ಹೆಂಡತಿಗೆ 35. ಅವಳಿಗೆ ಯಾವಾಗ ನೋಡಿದರೂ ಕಾಯಿಲೆ. ಗರ್ಭಕೋಶದ ಸಮಸ್ಯೆಯಿರುವುದರಿಂದ ಅವಳಿಗೆ ವಿಪರೀತ ಬ್ಲೀಡಿಂಗಿನ ಪ್ರಾಬ್ಲೆಂ ಇದೆ. ನನಗೆ ಸೆಕ್ಸ್ ಬಗ್ಗೆ ಮೊದಲಿಂದಲೂ ವಿಪರೀತ ಆಸಕ್ತಿ. ಆದರೆ ಈಗ ನನ್ನ ಲೈಂಗಿಕ ಜೀವನಕ್ಕೇ ಹೊಡೆತ ಬಿದ್ದಿದೆ. ನನಗೆ ಸುಖ ಕೊಡಲಾರದ ಹೆಂಡತಿ ಇರುವುದಕ್ಕಿಂತ ಅವಳು ಸತ್ತೇ ಹೋದರೆ ಬೇರೆ ಮದುವೆಯಾದರೂ ಮಾಡಿಕೊಳ್ಳಬಹುದಿತ್ತು ಅಂತಲೂ ಅನಿಸುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರಿರುವ ನನಗೆ ಬೇರೆ ಕಡೆ ಅದನ್ನು ಹುಡುಕಿಕೊಂಡು ಹೋಗುವುದೂ ಅಸಾಧ್ಯ. ನಮ್ಮದು ಜಾಯಿಂಟ್ ಫ್ಯಾಮಿಲಿ. ನನ್ನ ತಮ್ಮ ನನಗಿಂತ ಹತ್ತು ವರ್ಷ ಚಿಕ್ಕವನು. ಅವನಿಗೆ ಕಳೆದ ವರ್ಷವಷ್ಟೇ ಮದುವೆಯಾಗಿದೆ. ಅವನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ. ಸೆಕ್ಸಿಯಾಗಿಯೂ ಇದ್ದಾಳೆ. ಅವಳು ಜೀನ್ಸ್ ಟೀಶರ್ಟ್ ತೊಟ್ಟು ಸ್ಕೂಟರಿನಲ್ಲಿ ಗಾಗಲ್ಸ್ ಧರಿಸಿಕೊಂಡು ಹೋಗುವಾಗ ನನಗೂ ಅಂತಹ ಹೆಂಡತಿ ಇರಬಾರದಿತ್ತೇ ಅನಿಸುತ್ತದೆ. ಮನೆಯಲ್ಲಿ ಬರ್ಮುಡಾ ಹಾಕಿಕೊಂಡು ಓಡಾಡುವ ಅವಳ ಮೇಲೆ ನನಗೆ ಆಸೆಯಾಗುತ್ತಿದೆ. ಅವಳು ಸ್ವಲ್ಪವೂ ಶಿಗ್ಗಿಲ್ಲದೇ ಕೆಲವೊಮ್ಮೆ ನನ್ನ ಪಕ್ಕದಲ್ಲಿಯೇ ಬಂದು ಕುಳಿತು ಟೀವಿ ನೋಡುತ್ತಾಳೆ. ಅವಳಿಗೂ ನನ್ನ ಮೇಲೆ ಮನಸ್ಸಿರಬಹುದೇ? ನನ್ನ ತಮ್ಮ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿರುವುದರಿಂದ ಆಗಾಗ ಹೊರಊರಿಗೂ ಹೋಗುತ್ತಿರುತ್ತಾನೆ. ಅಂತಹ ಸಂದರ್ಭದಲ್ಲಿ ಅವಳು ರೂಮಿನಲ್ಲಿ ಒಂಟಿಯಾಗಿರುತ್ತಾಳೆ. ಅವಳನ್ನು ಆ ಸಮಯದಲ್ಲಿ ನಾನು ಉಪಯೋಗಿಸಿಕೊಂಡರೆ ತಪ್ಪೇ? ಅವಳು ಮಾಡರ್ನ್ ಹುಡುಗಿಯಾಗಿರುವುದರಿಂದ ಒಪ್ಪಬಹುದು ಅಂತ ನನ್ನ ಭಾವನೆ. ನೀವೆನನ್ನುತ್ತೀರಿ?

ಉ : ಈ ರೀತಿ ಕೆಟ್ಟದಾಗಿ ಯೋಚಿಸುವ ನೀವು ಎಷ್ಟು ವಿಕೃತ ಮನಸ್ಸುಳ್ಳವರು ಅಂತ ಯಾರಾದರೂ ಊಹಿಸಬಹುದು. ನಿಮ್ಮ ಹೆಂಡತಿಗೆ ಅಸೌಖ್ಯವಾಗಿರುವುದು ನಿಮ್ಮ ದುರಾದೃಷ್ಟ. ನಿಮ್ಮ ಬಗ್ಗೆ ಆ ವಿಷಯದಲ್ಲಿ ಮರುಕ ಇದೆ. ಎಷ್ಟೇ ಆದರೂ ಅವಳು ನಿಮ್ಮ ಕೈಹಿಡಿದವಳು. ನಿಮ್ಮ ಮಕ್ಕಳ ತಾಯಿ. ಅವಳು ಆರೋಗ್ಯವಾಗಿರುವಾಗ ನಿಮ್ಮ ಸೇವೆ ಮಾಡಿದವಳು. ಏನೋ ಅವಳಿಗೀಗ ಹುಶಾರಿಲ್ಲ ಅಂದಾಕ್ಷಣ ಅವಳು ಸತ್ತುಹೋದರೂ ಚಿಂತೆ ಇಲ್ಲ ಅನ್ನುವ ಮನಸ್ಸು ನಿಮಗೆ ಹೇಗಾದರೂ ಬರತ್ತೋ. ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆಯಿರುವುದು ಈಗ ಕಾಮನ್. ಸರಿಯಾದ ಚಿಕಿತ್ಸೆ ಪಡೆದರೆ ಗುಣಪಡಿಸಲಾಗದ್ದೇನಲ್ಲ. ನಿಮಗೂ ಸ್ವಲ್ಪ ವ್ಯವಧಾನ ಬೇಕು ಅಷ್ಟೇ. ಅದಕ್ಕಿಂತ ಹೆಚ್ಚಾಗಿ ಹೆಂಡತಿಯ ಮೇಲೆ ಪ್ರೀತಿ ಇರಬೇಕು. ಇಂತಹ ಸಂದರ್ಭದಲ್ಲಿ ಅವಳನ್ನು ಸರಿಯಾಗಿ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಕೂಡಾ. ಒಂದೊಮ್ಮೆ ನಿಮಗೇ ಯಾವುದೋ ಕಾಯಿಲೆ ಬಾಧಿಸಿ ನಿಮ್ಮ ಹೆಂಡತಿಯೂ ನಿಮ್ಮ ಬಗ್ಗೆ ಅದೇ ತರಹ ಯೋಚಿಸಿದ್ದರೆ? ಯಾರಿಗೆ ಯಾವಾಗ ಏನು ಬೇಕಾದರೂ ಆಗಬಹುದು ಅನ್ನುವುದು ನೆನಪಿರಲಿ. ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ನಿಮ್ಮ ಮನಸ್ಸಿನ ಕಾಮನೆಗಳ ಮೇಲೆ ಹತೋಟಿ ಸಾಧಿಸಿಕೊಳ್ಳಿ. ಇನ್ನು ನಿಮ್ಮ ಹೆಂಡತಿಗೆ ಹುಶಾರಿಲ್ಲ ಅಂತ ತಮ್ಮನ ಹೆಂಡತಿಯ ಮೇಲೆ ಕಣ್ಣಿಡುವುದು ನಿಜಕ್ಕೂ ನೀವು ಚೀಪ್ ಅಂತಲೇ ಅನ್ನಬೇಕು. ಅವಳು ನಿಮಗೆ ಅಣ್ಣನ ತರಹ ಸಲುಗೆ ತೋರಿಸಿರಬಹುದು. ಅದನ್ನೇ ತಪ್ಪಾಗಿ ತಿಳಿದು ಅವಳನ್ನೇ ಬಯಸುವ ಮಟ್ಟಕ್ಕೆ ನೀವು ಇಳಿದಿರುವುದು ಅವಳಿಗೆ ಗೊತ್ತಾದರೆ ನಿಮ್ಮ ಮುಖ ನೋಡಲಿಕ್ಕಿಲ್ಲ. . ನಿಮ್ಮ ತಮ್ಮನಿಗೆ ನಿಮ್ಮ ಈ ವಿಕೃತಮನಸ್ಸು ತಿಳಿದರಂತೂ ಅಣ್ಣ ಅಂತಲೂ ನೊಡದೇ ತಪರಾಕಿ ಬಿಗಿಯಬಹುದು, ಹುಶಾರ್.