ಕ್ರಿಕೆಟ್ ಬೆಟ್ಟಿಂಗ್ ಮತ್ತೆ ಶುರು

 

ಮಂಗಳೂರು : ಕೇಂದ್ರ ಸರಕಾರ ಸಾವಿರ ಮತ್ತು 500 ರೂ ನೋಟುಗಳ ಚಲಾವಣೆಯನ್ನು ದಿಢೀರ್ ಸ್ಥಗಿತಗೊಳಿಸಿದ ಬೆನ್ನಲ್ಲೇ ಕಳೆದ ತಿಂಗಳಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಬೆಟ್ಟಿಂಗ್ ಈಗ ಮತ್ತೆ ಆರಂಭವಾಗಿದೆ.

ಕೇವಲ ನಗದು ರೂಪದಲ್ಲಿ ದೊಡ್ಡ ಮೊತ್ತದ ನೋಟುಗಳ ಮೂಲಕ ಮಾತ್ರ ನಡೆಯುತ್ತಿದ್ದ ಕ್ರಿಕೆಟ್ ದಂಧೆ ಕಳೆದ ಕೆಲವು ವರ್ಷಗಳಿಂದ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನಾದಿನ ನೋಟು ಚಲಾವಣೆ ಸ್ಥಗಿತದ

ಘೊಷಣೆ ಹೊರಬಿದ್ದ ಬೆನ್ನಲ್ಲೇ ಈ ದಂಧೆ ನಿಂತು ಹೋಗಿತ್ತು.

ಸುಮಾರು ಇಪ್ಪತು ದಿವಸ ಬಂದ್ ಆಗಿದ್ದ ಕ್ರಿಕೆಟ್ ಬೆಟ್ಟಿಂಗ್ ಅನಂತರ ಹೊಸ ನೋಟುಗಳ ಮೂಲಕ ನಿಧಾನಗತಿಯ ಪಾವತಿ ವ್ಯವಸ್ಥೆಯಲ್ಲಿ ಆರಂಭವಾಗಿದೆ ಎನ್ನುತ್ತಾರೆ ಸ್ಥಳೀಯವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವ ವೃತ್ತಿಪರ ಆಟಗಾರರು.

ಸರ್ಕಾರದ ನಿರ್ಧಾರದಿಂದ ದೇಶದಲ್ಲಿ ಹಲವು ಕಾನೂನುಬಾಹಿರ ವ್ಯವಹಾರಗಳಿಗೆ ಹೊಡೆತ ಬಿದ್ದಿತ್ತು. ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಪ್ರಮುಖವಾಗಿತ್ತು.  ನಗದು ರೂಪದಲ್ಲೇ ನಡೆಯುತ್ತಿದ್ದ ಈ ದಂಧೆಗೆ, ದೊಡ್ಡ ಮುಖಬೆಲೆಯ ನೋಟು ಸ್ಥಗಿತಗೊಳಿಸಿದ್ದು ಮಾರಕ ಹೊಡೆತ ನೀಡಿತ್ತು. ಇದರಿಂದ ಕ್ರಿಕೆಟ್ ಬುಕ್ಕಿಗಳೂ ಕಕ್ಕಾಬಿಕ್ಕಿಯಾಗಿದ್ದರು. ಆದರೆ ಹೊಸ ನೋಟು ಸಾಕಷ್ಟು ಪ್ರಮಾಣದಲ್ಲಿ ಬಳಕೆಗೆ ಬಂದ ನಂತರ ಈ ದಂಧೆ ಮರುಜೀವ ಪಡೆದುಕೊಳ್ಳತೊಡಗಿದೆ.

ದೇಶದಲ್ಲಿ ಮಾಸಿಕ 250 ಸಾವಿರ ಕೋಟಿ ರೂಪಾಯಿ ಮೊತ್ತದ ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರ ನಡೆಯುತಿತ್ತು ಎಂದು ಒಂದು ಅಂಕಿ ಅಂಶ ಹೇಳುತ್ತದೆ. ಬೆಂಗಳೂರು, ಅಹಮದಾಬಾದ್, ಜೈಪುರ, ಇಂದೋರ್, ಸೂರತ್, ಮುಂಬೈ, ದೆಹಲಿ ಮಹಾನಗರಗಳಲ್ಲಿ ಪ್ರಧಾನ ಬುಕ್ಕಿಗಳು ಕಾರ್ಯನಿರ್ವಹಿಸಿದರೆ, ಮಂಗಳೂರು, ಮೈಸೂರು, ಧಾರವಾಡ, ಬೆಳಗಾವಿಯಂತಹ ಎರಡನೇ ಹಂತದ ನಗರಗಳಲ್ಲಿ ಕೂಡ ಬುಕ್ಕಿಗಳು ಇದ್ದಾರೆ.

ಜೂಜಿಗೆ ಶರಣಾಗಿ ಹೋಗಿರುವ ಮಂದಿಗೆ ಬೆಟ್ಟಿಂಗ್ ಮತ್ತೆ ಆರಂಭವಾಗಿರುವುದು ಸ್ವಲ್ಪ ಮಟ್ಟಿನ ಸಂತಸ ತಂದರೆ ಸಾಕಷ್ಟು ನೋಟು ಚಲಾವಣೆ ಇಲ್ಲದಿರುವುದು ಅವರಿಗೂ ಸಮಸ್ಯೆಯಾಗಿ ಕಾಡಿದೆ.