ಯುವ ಕಾಂಗ್ರೆಸ್ ಪೋಸ್ಟರಲ್ಲಿ ಸ್ಥಾನ ಪಡೆದ ಕವಿತಾ

`ನಾನೂ ಟಿಕೆಟ್ ಆಕಾಂಕ್ಷಿ’  ಎನ್ನುತ್ತಿರುವ ಮೇಯರ್

ಕರಾವಳಿ ಅಲೆ ವರದಿ

 ಮಂಗಳೂರು :  ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಗೆ ರಾಜ್ಯ ಯುವ ಕಾಂಗ್ರೆಸ್ ಬಿಡುಗಡೆಗೊಳಿಸಲಿರುವ ಯುವ ನಾಯಕರ ಪೋಸ್ಟರುಗಳಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರೂ ಸ್ಥಾನ ಪಡೆದಿದ್ದಾರೆ. `ನನ್ನ ಕರ್ನಾಟಕ’ ಹೆಸರಿನ ಈ ಪೋಸ್ಟರುಗಳಲ್ಲಿ ಕಾಣಿಸಿಕೊಂಡಿರುವ ಇತರ ನಾಯಕರೆಂದರೆ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಯು ಟಿ ಖಾದರ್ ಹಾಗೂ ರಿಝ್ವಾನ್ ಅರ್ಷದ್. ಕವಿತಾ ಸನಿಲ್ ಅವರಿಗಾಗಿ ವಿನ್ಯಾಸಗೊಳಿಸಲ್ಪಟ್ಟ ಪೋಸ್ಟರುಗಳಲ್ಲಿ ಯುವತಿಯರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. “ರಾಜ್ಯ ಸರಕಾರ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ ಹಾಗೂ ಇದು ಕರ್ನಾಟಕದಲ್ಲಿ ಕೈಗೊಳ್ಳಲಾದ ಹಲವಾರು ಯೋಜನೆಗಳಲ್ಲಿ ಪ್ರತಿಫಲಿತವಾಗಿದೆ.  ರಾಜ್ಯವು ಎಲ್ಲಾ ಹಂತಗಳಲ್ಲಿಯೂ ಮಹಿಳೆಯರ ಸಬಲೀಕರಣದತ್ತ ಒತ್ತು ನೀಡಿದೆ, ಇದು ಎಲ್ಲಾ ರಂಗಗಳ ಬೆಳವಣಿಗೆಗೂ   ಹಾಗೂ ಸಾಮಾಜಿಕ ಪರಿವರ್ತನೆಗೆ ರಹದಾರಿಯಾಗಿದೆ, ಇದು ನನ್ನ ಕರ್ನಾಟಕ” ಎಂದು ಕವಿತಾ ಸನಿಲ್ ಅವರಿಗಾಗಿ ಮೀಸಲಿರಿಸಲಾದ ಪೋಸ್ಟರಿನಲ್ಲಿ ತಿಳಿಸಲಾಗಿದೆ. “ಯುವ ಮೇಯರ್ ಆಗಿ ನಾನು ಕೈಗೊಂಡ ಹಲವಾರು ಕ್ರಮಗಳನ್ನಾಧರಿಸಿ ನನ್ನನ್ನು ಆರಿಸಲಾಗಿದೆ. ಪಕ್ಷದ ರಾಜ್ಯ ಮಟ್ಟದ ಪ್ರಚಾರಾಭಿಯಾನದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಅತೀವ ಸಂತಸವಿದೆ. ನಾನು ಕೂಡಾ  ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ  ಯಾವುದೂ ಅಂತಿಮಗೊಂಡಿಲ್ಲ, ಮಾರ್ಚ್ ಎರಡನೇ ವಾರದೊಳಗೆ ಅಂತಿಮಗೊಳ್ಳುವ  ಸೂಚನೆಯಿದೆ” ಎನ್ನುವ ಮೂಲಕ ಕವಿತಾ ಸನಿಲ್ ತಮ್ಮ  ಮಹತ್ವಾಕಾಂಕ್ಷೆಯನ್ನು ಹೊರಗೆಡಹಿದ್ದಾರೆ. ಕಾಂಗ್ರೆಸ್  ಪಕ್ಷ  `ನನ್ನ ಕರ್ನಾಟಕ’ ಅಭಿಯಾನದ ಭಾಗವಾಗಿ  @ನನ್ನ_ಕರ್ನಾಟಕ ಎಂಬ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದ್ದು, ಯುವಜನತೆಯನ್ನು ಪಕ್ಷದತ್ತ ಸೆಳೆಯುವುದೇ ಇದರ ಉದ್ದೇಶವಾಗಿದೆ.

LEAVE A REPLY