ಕದ್ರಿ ಉದ್ಯಾನವನದಲ್ಲಿ ಮದ್ಯ ಮೇಳ ಸಮರ್ಥನೀಯವಲ್ಲ

ಕಳೆದ ನವೆಂಬರ್ 26, 27, 28ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ದ್ರಾಕ್ಷಾರಸ ಉತ್ಸವದ ಹೆಸರಲ್ಲಿ ಮದ್ಯಮೇಳ ಆಯೋಜಿಸಲ್ಪಟ್ಟಿತು. ಉದ್ಯಾನವನದಂತಹ ಸಾರ್ವಜನಿಕ ಸ್ಥಳದಲ್ಲಿ ಈ ಮೇಳ ಆಯೋಜಿಸುವ ದರ್ದು ಏನಿತ್ತು ? ವಿಶೇಷವೆಂದರೆ, ಈ ಕಾರ್ಯಕ್ರಮ ಸರಕಾರಿ ಪ್ರಾಯೋಜಕತ್ವದಲ್ಲೇ ನಡೆದಿರುವುದು. ಹೋಟೇಲು ಮತ್ತು ಮದ್ಯದಂಗಡಿಗಳಲ್ಲಿ ಈಗಾಗಲೇ ಮದ್ಯ ಮಾರಾಟಕ್ಕೆ ಅನುಮತಿ ಇರುವಾಗ ಕುಟುಂಬಗಳ ಮಕ್ಕಳ ಜತೆ ವಿಹರಿಸಲು ಬರುವ ಉದ್ಯಾನವನದಲ್ಲಿ ಈ ರೀತಿಯ ಉತ್ಸವ ಆಯೋಜಿಸುವುದು ಸರಿಯೆ ? ಯುವಕರಲ್ಲಿ ಮದ್ಯಪಾನ ಚಟ ಪ್ರೋತ್ಸಾಹಿಸಿದಂತೆ ಆಗುವುದಿಲ್ಲವೇ ? ಈಗಾಗಲೇ ಮಾದಕ ದ್ರವ್ಯ ವ್ಯಸನದಿಂದ ತತ್ತರಿಸಿರುವ ಯುವಜನತೆಯನ್ನು ಮಗದೊಂದು ವ್ಯಸನಕ್ಕೆ ತಳ್ಳುವುದು ಅದೆಷ್ಟು ಸೂಕ್ತ ? ಸಭ್ಯ ಪ್ರಜ್ಞಾವಂತ ಜನತೆ ಇಂತಹ ವಿವೇಚನಾರಹಿತ ಕೃತ್ಯವನ್ನು ಸಹಿಸಿ ಸುಮ್ಮನಿರಬೇಕೆ ?

  • ಡಾ ಪಿ ವಾಮನ ಶೆಣೈ, ಮಂಗಳೂರು