ಆಕ್ಸಿಡೆಂಟ್ ಬಳಿಕ ಅವನು ಬದಲಾಗಿದ್ದಾನೆ

ಮೊದಲೆಲ್ಲ ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಎಲ್ಲೆಂದರಲ್ಲಿ

ಓಡಾಡಿಕೊಂಡಿದ್ದವನಿಗೆ ಜೀವನವೆಂದರೇನು ಅಂತ ಆ ಅಪಘಾತ ತಿಳಿಸಿದೆ.

ಪ್ರ : ನನಗೀಗ 24 ವರ್ಷ. ಅವನು ನನಗಿಂತ ಎರಡು ವರ್ಷ ದೊಡ್ಡವನು. ಕೆಲವು ಸಮಯಗಳಿಂದ ಪ್ರೀತಿಯಲ್ಲಿ ಇದ್ದೇವೆ. ಅವನು ಮೂಲತಃ ಹುಡುಗಾಟದ ಸ್ವಭಾವದವನು. ಯಾವ ವಿಷಯವನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಬೈಕಿನಲ್ಲಿ ನನ್ನ ಜೊತೆ ಎಲ್ಲೆಂದರಲ್ಲಿ ಸುತ್ತುತ್ತಾ ಬಂದ ಸಂಬಳವನ್ನೆಲ್ಲ ಜಾಲಿಯಾಗಿ ಖರ್ಚು ಮಾಡಿಕೊಂಡಿರುವುದು ಅವನಿಗಿಷ್ಟವಾಗಿತ್ತು. ಆದರೆ ಅವನ ಆ ಹ್ಯಾಪಿ-ಗೋ-ಲಕ್ಕಿ ಗುಣವೇ ಈಗ ಮಾಯವಾಗಿಬಿಟ್ಟಿದೆ. ಅವನ ಈ ಬದಲಾವಣೆಗೆ ಕಾರಣವಾಗಿದ್ದು ಆ ದಿನದÀ ಅಪಘಾತ. ಅಂದು ನಾವಿಬ್ಬರೂ ಜೊತೆಯಲ್ಲಿ ಹೋಗುತ್ತಿರುವಾಗ ಸ್ಪೀಡಾಗಿ ಬಂದ ಟೆಂಪೋ ನಮ್ಮಿಬ್ಬರನ್ನು ಬೈಕ್ ಸಮೇತ ಕೆಳಗುರುಳಿಸಿತು. ನಾನು ಚಿಕ್ಕಪುಟ್ಟ ಗಾಯಗಳಿಂದ ಪಾರಾದರೂ ಅವನು ಮಾತ್ರ ಮೂರು ತಿಂಗಳು ಹಾಸಿಗೆಯಲ್ಲೇ ಕಳೆಯುವಂತಾಯಿತು. ಅದರ ನಂತರ ಈಗ ಮಾತುಮಾತಿಗೂ ದೇವರ ವಿಷಯ ಮಾತಾಡುತ್ತಾನೆ. ಮೊದಲೆಲ್ಲ ದೇವಸ್ಥಾನಕ್ಕೆ ಒತ್ತಾಯಿಸಿದರೂ ಬರದವನು ಈಗ ದಿನಕ್ಕೆರಡು ಬಾರಿ ಹೋಗುತ್ತಾನೆ. ಭಜನೆ ಅಂದರೆ ಮೂಗು ಮುರಿಯುತ್ತಿದ್ದವನು ದಿನಾ ಶ್ಲೋಕ ಹೇಳುತ್ತಾನೆ. ಚೆಲ್ಲುಚೆಲ್ಲಾಗಿ ನನ್ನ ಜೊತೆ ನಡೆದುಕೊಳ್ಳುತ್ತಿದ್ದ ಅವನೀಗ ಗಂಭೀರವಾಗಿ ಆಧ್ಯಾತ್ಮಿಕ ಮಾತಾಡುತ್ತಾನೆ. ಅವನ ಈ ನಡೆವಳಿಕೆ ನನಗೆ ಭಯ ಹುಟ್ಟಿಸುತ್ತಿದೆ. ಅವನ ಹಾಸ್ಯ ಸ್ವಭಾವಕ್ಕೆ ಮನಸೋತ ನನಗೆ ಈ ಹೊಸ ಅವತಾರ ಅವನನ್ನು ಅಪರಿಚಿತ ವ್ಯಕ್ತಿಯನ್ನಾಗಿಸಿದೆ. ಆದರೂ ಅವನ ಬಗ್ಗೆ ನನ್ನ ಒಲವು ಕಡಿಮೆಯಾಗಿಲ್ಲ. ಅವನೂ ನನ್ನ ಸ್ನೇಹವನ್ನೇನೂ ಬಿಟ್ಟಿಲ್ಲ. ಆದರೂ ಅವನು ಮೊದಲಿನಂತಾಗಬಹುದೇ?

: ತನಗೆ ಪುನರ್ಜನ್ಮ ಸಿಕ್ಕಿದ್ದು ದೇವರ ದಯೆಯಿಂದಲೇ ಅಂತ ತಿಳಿದು ಅವನು ಕೃತಜ್ಞತೆಯಿಂದ ದೇವರ ಭಕ್ತಿಯನ್ನು ಮಾಡುತ್ತಿದ್ದುದರಲ್ಲಿ ಅಂತಹ ಹೆದರುವಂಥದ್ದೇನಿದೆ? ಸಾವಿನ ಅಂಚಿನವರೆಗೆ ಹೋಗಿ ಮೂರು ತಿಂಗಳು ಹಾಸಿಗೆಯಲ್ಲೇ ಕಳೆದ ಅವನ ಕಷ್ಟ ಅವನನ್ನು ಈ ರೀತಿ ಬದಲಾಯಿಸಿದೆ. ಮೊದಲೆಲ್ಲ ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದವನಿಗೆ ಜೀವನವೆಂದರೇನು ಅಂತ ಆ ಅಪಘಾತ ತಿಳಿಸಿದೆ. ಅವನ ನೋವು ಅರ್ಥ ಮಾಡಿಕೊಳ್ಳಿ. ದೇವರ ಮೇಲಿನ ಅವನ ಭಕ್ತಿ ಈಗ ಅವನನ್ನು ಜವಾಬ್ದಾರಿಯುತನನ್ನಾಗಿ ಮಾಡಿದೆ. ಅದೂ ಅಲ್ಲದೇ ಇದೀಗ ತಾನೇ ಅವನು ಆ ಶಾಕಿನಿಂದ ಹೊರಬಂದು ತನ್ನನ್ನು ಮೊದಲಿನಂತೆ ಓಡಾಡುವಂತೆ ಮಾಡಿದ ದೇವರಿಗೆ ಎಷ್ಟು ಕೈಮುಗಿದರೂ ಕಡಿಮೆ ಅನ್ನುವ ಅವನ ಭಾವನೆಯಲ್ಲಿ ತಪ್ಪೇನಿದೆ? ನಿಮ್ಮ ಹುಡಗ ಪುನಃ ನಿಮಗೆ ಸಿಕ್ಕಿದ್ದು ನಿಮ್ಮ ಪುಣ್ಯ. ಅವನ ಭಾವನೆಯಲ್ಲಿ ಸಹಭಾಗಿಯಾಗಿ. ಕಾಲಕ್ರಮೇಣ ನಿಮ್ಮ ಪ್ರೀತಿ ಅವನು ಪಟ್ಟ ನೋವನ್ನು ಮರೆಸಿ ಮೊದಲಿನಂತೆ ಲವ್ವರ್‍ಬಾಯ್ ಆಗುತ್ತಾನೆ ಬಿಡಿ.