ಅವಳನ್ನು ಬಿಟ್ಟಿರಲಾರೆ ಅನಿಸುತ್ತಿದೆ

ಪ್ರ : ಅವಳು ನನ್ನ ಅಸಿಸ್ಟೆಂಟಾಗಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದಳು. ನನ್ನದು ರಿಯಲ್‍ಎಸ್ಟೇಟ್ ಬಿಸಿನೆಸ್. ನನ್ನ ಬಿಸಿನೆಸ್ ಈ ಮಟ್ಟದಲ್ಲಿ ಬೆಳೆಯಲು ಅವಳ ಯೋಗದಾನ ತುಂಬಾ ಇದೆ. ಕ್ಲೈಂಟ್ಸ್ ಜೊತೆ ಸತತ ಸಂಪರ್ಕವಿರಿಸಿಕೊಂಡು ಬಿಸಿನೆಸ್ ಡೀಲಾಗುವವರೆಗೆ ಪ್ರತೀ ಹಂತದಲ್ಲೂ ಫಾಲೋ-ಅಪ್ ಮಾಡುತ್ತಿದ್ದಳು. ನನಗೆ ಅವಳು ಉತ್ತಮ ಸ್ನೇಹಿತೆಯಾಗಿದ್ದಳು. ಅದು ಬಿಟ್ಟು ನಮ್ಮಿಬ್ಬರ ನಡುವೆ ಬೇರೆ ಏನೂ ಇರಲಿಲ್ಲ. ಅವಳು ಬಂಟ್ಸ್. ನಾನು ಬಿಲ್ಲವ. ಈಗ ಅವಳಿಗೆ ಹುಡುಗ ನಿಶ್ಚಯವಾಗಿದ್ದಾನೆ. ಮುಂದಿನ ತಿಂಗಳು ಎಂಗೇಜ್‍ಮೆಂಟ್. ಅವಳೀಗ ಕೆಲಸಕ್ಕೆ ಬರುವುದು ನಿಲ್ಲಿಸಿ ಹದಿನೈದು ದಿನವಾಯಿತು. ಈಗ ಕೆಲಸಕ್ಕೆ ಬೇರೊಬ್ಬ ಹುಡುಗನನ್ನು ತೆಗೆದುಕೊಂಡಿದ್ದೇನೆ. ಅವಳು ಆ ಹುಡುಗನಿಗೆ ಸರಿಯಾದ ಟ್ರೈನಿಂಗ್ ಕೊಟ್ಟು ಹೋಗಿದ್ದರಿಂದ ಕೆಲಸವೇನೋ ಸರಿಯಾಗಿಯೇ ನಡೆದುಕೊಂಡು ಹೋಗುತ್ತಿದೆ. ಆದರೆ ಅವಳಿಲ್ಲದ ಆಫೀಸಿಗೆ ಬರಲೂ ನನಗೀಗ ಮನಸ್ಸಾಗುತ್ತಿಲ್ಲ. ಜೀವನದ ಅತ್ಯಮೂಲ್ಯ ವಸ್ತುವನ್ನು ಕಳೆದುಕೊಂಡ ರೀತಿಯ ಪೇಚಾಟ. ಅವಳಿದ್ದಾಗ ಕೆಲಸದಲ್ಲಿ ಇರುತ್ತಿದ್ದ ಹುಮ್ಮಸ್ಸು ಈಗ ಇಲ್ಲ. ನನ್ನ ಜೀವನದ ಅವಿಭಾಜ್ಯ ಅಂಗವೇ ಅವಳಾಗಿದ್ದಳು ಅಂತ ಈಗ ರಿಯಲೈಸ್ ಆಗುತ್ತಿದೆ. ಅವಳ ನೆನಪಾಗದ ಕ್ಷಣಗಳಿಲ್ಲ. ಇದು ಪ್ರೀತಿಯಲ್ಲದೇ ಮತ್ತೇನು ಅಲ್ವಾ? ಹೌದು, ನಾನು ಅವಳನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಅವಳಿಲ್ಲದ ಬದುಕನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತಿದೆ. ಅವಳು ಈ ಆಫೀಸು ಬಿಡುವ ದಿನ ಅವಳ ಕಣ್ಣಲ್ಲೂ ನೋವಿತ್ತು. ಮಾತಾಡಲೇ ಕಷ್ಟಪಡುತ್ತಿದ್ದಳು. ಅವಳಿಗೂ ನನ್ನ ಮೇಲೆ ಅದೇ ಭಾವನೆ ಇದ್ದ್ದಿರಬಹುದು ಅಂತ ನನಗನಿಸುತ್ತಿದೆ. ನಾನೀಗ ಏನು ಮಾಡಬೇಕೆಂದು ಕೂಡಲೇ ಉತ್ತರಿಸಿ ಪ್ಲೀಸ್.

ಉ : ಟ್ರೈನ್ ತಪ್ಪಿಹೋಗುತ್ತಿದೆ. ಕೂಡಲೇ ನೀವು ಕಾರ್ಯಪ್ರವೃತ್ತರಾಗದಿದ್ದರೆ ನಿಮಗೆ ಜೀವನದಲ್ಲಿ ಮುಂದೆಂದೂ ಅವಳು ಸಿಗುವುದಿಲ್ಲ. ಮೂರು ವರ್ಷದ ನಿಮ್ಮ ನಿರಂತರ ಒಡನಾಟ ನಿಮ್ಮಲ್ಲಿ ಅವಳ ಮೇಲೆ ಪ್ರೀತಿ ಮೂಡಿಸಿದೆ. ಅವಳಿದ್ದಾಗ ನೀವು ಅವಳನ್ನು ಬರೀ ಸ್ನೇಹಿತೆಯಂತೆ ಪರಿಗಣಿಸಿದ್ದರೂ ನಿಮ್ಮ ಒಳಮನಸ್ಸು ಆಕೆಯ ಜೊತೆ ಬೆರೆತುಹೋಗಿತ್ತು. ನಿಮಗೆ ಈಗಲಾದರೂ ನಿಮ್ಮ ಮನಸ್ಸು ಅರ್ಥವಾಯಿತಲ್ಲ, ಇನ್ನು ತಡಮಾಡಬೇಡಿ. ಮೊದಲು ಅವಳನ್ನು ಸಂಪರ್ಕಿಸಿ ನಿಮಗೆ ಅವಳ ಮೇಲಿದ್ದ ಭಾವನೆಯ ಕುರಿತು ನಿಸ್ಸಂಕೋಚವಾಗಿ ಹೇಳಿ. ಅವಳೂ ನಿಮ್ಮ ಮಾತಿಗೆ ಪ್ರತಿಸ್ಪಂದಿಸಬಹುದು. ಅವಳ ಒಪ್ಪಿಗೆ ಪಡೆದ ನಂತರ ಅವಳ ಪಾಲಕರಿಗೆ ಮೊದಲು ವಿಷಯ ತಿಳಿಸಿ. ನೀವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ ತಲುಪಿದ್ದಾಗಿಯೂ, ಇಬ್ಬರೂ ದೂರವಾದರೆ ಬದುಕೇ ಬರ್ಬಾದ್ ಆಗುವುದಾಗಿಯೂ ಅವರ ಮನಮುಟ್ಟುವಂತೆ ತಿಳಿಸಿ. ಜಾತಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಪ್ರೀತಿಯ ಮುಂದೆ ಆ ಸಮಸ್ಯೆ ಬರುವುದಿಲ್ಲ ಅಂತ ಹೇಳಿ. ಹುಡುಗ ಫಿಕ್ಸ್ ಆಗಿದ್ದರೂ ಎಂಗೇಜ್‍ಮೆಂಟ್ ಇನ್ನೂ ಆಗಿರದ ಕಾರಣ ಸ್ವಲ್ಪ ಮುಜುಗರವಾದರೂ ಗಂಡಿನ ಕಡೆಯವರಿಗೆ ವಿಷಯ ತಿಳಿಸಿ ಸಾರಿ ಕೇಳಿದರೆ ಅವರೇನೂ ರಂಪಾಟ ಮಾಡಲಿಕ್ಕಿಲ್ಲ. ಅವಳು ನಿಮ್ಮ ಕೈತಪ್ಪಿ ಹೋಗುವ ಮೊದಲೇ ಅವಳನ್ನು ನಿಮ್ಮ ಜೊತೆಗಾತಿಯನ್ನಾಗಿ ಮಾಡಿಕೊಳ್ಳಿ. ಆದರೆ ನೆನಪಿರಲಿ, ಅವಳಿಗೆ ನಿಮ್ಮ ಮೇಲೆ ಪ್ರೀತಿ ಇರದೇ ಈ ವಿಷಯದಲ್ಲಿ ನಿಮಗೆ ಸಾಥ್ ಕೊಡಲು ನಿರಾಕರಿಸಿದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡು ನೀವು ಅವಳಿಗೆ `ಒಳ್ಳೆಯದಾಗಲಿ’ ಅಂತ ಹರಸಿ ಜಂಟಲ್ ಮ್ಯಾನ್ ತರಹ ವರ್ತಿಸದೇ ಬೇರೆ ದಾರಿ ಇಲ್ಲ.