`ಅರ್ಕಾವತಿ ಹಗರಣದಲ್ಲಿ ಸೀಎಂಗೆ 1,000 ಕೋಟಿ ರೂ ಕಿಕ್ ಬ್ಯಾಕ್’

 

ಗಂಗಾವತಿ (ಕೊಪ್ಪಳ ಜಿಲ್ಲೆ) : ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಹಗರಣದಲ್ಲಿ ಸೀಎಂ ಸಿದ್ದರಾಮಯ್ಯ 1,000 ಕೋಟಿ ರೂ ಲಂಚ (ಕಿಕ್‍ಬ್ಯಾಕ್) ಸ್ವೀಕರಿಸಿದ್ದಾರೆಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು, ಈ ಆರೋಪಕ್ಕೆ ಸಂಬಂಧಿಸಿ ಕೆಲವಷ್ಟೇ ಮಾಹಿತಿ ನೀಡಿದರು. “ಹಣ ಗಳಿಸುವ ಉದ್ದೇಶದಿಂದಲೇ ಸೀಎಂ ಕೆಲವು ಮಹತ್ವದ ಹುದ್ದೆಗಳಿಗೆ ತನಗೆ ಹತ್ತಿರದವರನ್ನೇ ನಿಯುಕ್ತಿ ಮಾಡಿಕೊಂಡಿದ್ದಾರೆ. ಕೆಲವು ಮಂತ್ರಿಗಳು ಭ್ರಷ್ಟರಾಗಿದ್ದು, ಸೀಎಂ ಹಾಗೂ ಕೆಲವು ಅಧಿಕಾರಿಗಳು ಸೇರಿಕೊಂಡು ಈ ಹಗರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಶೆಟ್ಟರ್ ಆರೋಪಿಸಿದರು.
ಭ್ರಷ್ಟ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರನನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನಿಸುತ್ತಿರುವ ಸೀಎಂ, ಭ್ರಷ್ಟರಿಗೆ ಸಂಬಂಧಿಸಿದ ಹಗರಣಗಳ ತನಿಖೆ ಸಿಐಡಿಗೆ ನೀಡಿ, ಕೈತೊಳೆದುಕೊಳ್ಳಲು ಪ್ರಯತ್ನಿಸಿದ್ದಾರೆಂದು ಎಂದವರು ಆಪಾದಿಸಿದರು.
ಮಾಜಿ ಅಬಕಾರಿ ಸಚಿವ ಮೇಟಿ ಒಳಗೊಂಡಿರುವ ಲೈಂಗಿಕ ಹಗರಣ ತಿಳಿದಿರುವ ಸೀಎಂ ಮತ್ತು ಕೆಲವು ಸಂಪುಟ ಸಹೋದ್ಯೋಗಿಗಳು ಪ್ರಕರಣ ಮುಚ್ಚಿಹಾಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸಿಐಡಿ ತನಿಖೆ ಮೇಟಿಗೆ ಅನುಕೂಲ ಒದಗಿಸಲಿದ್ದು, ಅವರು ನಿರ್ದೋಷಿಯಾಗಲಿದ್ದಾರೆ. ಆದರೆ ಆರ್‍ಟಿಐ ಕಾರ್ಯಕರ್ತ ರಾಜಶೇಖರ, ಪೊಲೀಸ್ ಪೇದೆ ಸುಭಾಷ್ ಹಾಗೂ ನೊಂದ ಮಹಿಳೆಯ ವಿರುದ್ಧ ಕ್ರಮ ಜರುಗಿಸುವ ಹುನ್ನಾರ ಸರಕಾರದ್ದು ಎಂದು ಶೆಟ್ಟರ್ ಹೇಳಿದ್ದಾರೆ.